ದಾವಣಗೆರೆ ವಿವಿ ಯಡವಟ್ಟು: ‘ಇ–ಕಾಮರ್ಸ್’ ಪರೀಕ್ಷೆ ಮುಂದೂಡಿಕೆ
ದಾವಣಗೆರೆ, ಆ.6- ದಾವಣಗೆರೆ ವಿಶ್ವ ವಿದ್ಯಾಲಯದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಜೊತೆಗೆ ಉತ್ತರ ಮುದ್ರಿಸಿದ ಪ್ರತಿಯನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿದ ಪ್ರಸಂಗ ಮಂಗಳವಾರ ನಡೆದಿದೆ.
ವಾಣಿಜ್ಯ ವಿಭಾಗದ ಮುಕ್ತ ಆಯ್ಕೆ (ಓಪನ್ ಎಲೆಕ್ಟಿವ್) ‘ಇ–ಕಾಮರ್ಸ್’ ವಿಷಯದ ಪರೀಕ್ಷೆ ಮಂಗಳವಾರ ಬೆಳಿಗ್ಗೆ 10ಕ್ಕೆ ನಿಗದಿಯಾಗಿತ್ತು. 60 ಅಂಕದ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾರ್ಥಿಗಳಿಗೆ ವಿತರಿಸಲಾಯಿತು. ಕೆಲ ಹೊತ್ತಿನಲ್ಲಿ ಪ್ರಶ್ನೆಗಳೊಂದಿಗೆ ಉತ್ತರವೂ ಮುದ್ರಣವಾಗಿರುವುದನ್ನು ನೋಡಿ ವಿದ್ಯಾರ್ಥಿಗಳು ಕಕ್ಕಾ ಬಿಕ್ಕಿಯಾಗಿ, ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ 70ಕ್ಕೂ ಹೆಚ್ಚು ಕಾಲೇಜುಗಳು ವಿಶ್ವವಿದ್ಯಾ ಲಯದ ವ್ಯಾಪ್ತಿಯಲ್ಲಿವೆ. ಇದರಲ್ಲಿ ಈ ವಿಷಯವನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. 15 ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಯ ಜತೆಗೆ ಉತ್ತರ ಮುದ್ರಿಸಿದ ಪ್ರತಿಯನ್ನು ನೀಡಲಾಗಿತ್ತು.
ತಾಂತ್ರಿಕ ಕಾರಣಕ್ಕೆ ಪರೀಕ್ಷೆಯಲ್ಲಿ ಲೋಪ ಉಂಟಾಗಿದೆ. ಪರೀಕ್ಷೆಯನ್ನು ಮುಂದೂಡ ಲಾಗಿದ್ದು, ವಿದ್ಯಾರ್ಥಿಗಳಿಗೆ ಆಗಿರುವ ತೊಂದ ರೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಪರೀಕ್ಷೆಯ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ತಿಳಿಸಿದ್ದಾರೆ.