ಹೊಳೆಸಿರಿಗೆರೆಯ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ. ಚೇತನ್
ಮಲೇಬೆನ್ನೂರು, ಆ.4- ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಚೇತನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆ ಹಾಲನ್ನು ನೀಡಬೇಕು ಮತ್ತು ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡಬೇಕು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಮೆದು ಪೂರಕ ಆಹಾರವನ್ನು ನೀಡುವುದರೊಂದಿಗೆ ಎರಡು ವರ್ಷಗಳ ಕಾಲ ಎದೆಹಾಲನ್ನು ಉಣಿಸುವುದು ಬಹು ಮುಖ್ಯವಾಗಿರುತ್ತದೆ ಎಂದರು.
ತಾಯಿಯ ಹಾಲು ಶಿಶುಗಳ ಆರೋಗ್ಯಕರ ಬೆಳವಣಿಗೆ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ನೀವು ಎಷ್ಟು ಹೆಚ್ಚು ಹಾಲುಣಿಸುವಿರೋ ಅಷ್ಟು ಹೆಚ್ಚಿನ ಪ್ರಯೋಜನಗಳು ಮಕ್ಕಳಿಗೆ ಸಿಗುತ್ತವೆ. ಎದೆ ಹಾಲು ಕುಡಿದ ಮಕ್ಕಳು ದೀರ್ಘಕಾಲದ ಸಾಂಕ್ರಾಮಿಕ ರೋಗಗಳಿಗೆ ಕಡಿಮೆ ಒಳಗಾಗುತ್ತಾರೆ. ಸ್ತನ್ಯಪಾನವು ತಾಯಿಗೆ ಸಂಭವಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಡಾ.ಚೇತನ್ ತಿಳಿಸಿಕೊಟ್ಟರು.
ಆರೋಗ್ಯ ಕೇಂದ್ರದ ಔಷಧಿ ದಾಸ್ತಾನುದಾರರಾದ ಲತಾ, ಪ್ರಯೋಗಾಲಯ ತಂತ್ರಜ್ಞ ದೇವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ನಾಯಕ್, ಸುರಕ್ಷಣಾಧಿಕಾರಿ ಆಶಾರಾಣಿ, ಆಶಾ ಕಾರ್ಯಕರ್ತೆಯರಾದ ಮಾಲಾಶ್ರೀ, ಕರಿಬಸಮ್ಮ, ಕಸ್ತೂರಿ ಬಾಯಿ, ನೀಲಾಂಬಿಕೆ, ಪುಷ್ಪಾ, ಶಶಿಕಲಾ ಮತ್ತು ಅಂಗನವಾಡಿ ಕಾರ್ಯಕರ್ತೆ ಮಂಜಮ್ಮ ಹಾಗೂ ಮಕ್ಕಳ ತಾಯಂದಿರು ಭಾಗವಹಿಸಿದ್ದರು.