ದೂಡಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ಶೆಟ್ಟಿ ಭರವಸೆ
ದಾವಣಗೆರೆ, ಜು. 31 – ದೂಡಾ (ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ) ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ದಿನೇಶ್ ಕೆ. ಶೆಟ್ಟಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ದಿನೇಶ್ ಶೆಟ್ಟಿ, ದಾವಣಗೆರೆ ಹಾಗೂ ಹರಿಹರಗಳಲ್ಲಿ ರೈತರು ಜಮೀನು ನೀಡಿದರೆ 50 ಎಕರೆ ಜಮೀನು ಪಡೆದು ಬಡಾವಣೆಗಳನ್ನು ನಿರ್ಮಿಸಲಾಗುವುದು ಎಂದರು.
ಕೇವಲ ಒಂದೇ ಕಡೆ ನಗರ ಬೆಳೆಸದೇ, ನಾಲ್ಕು ದಿಕ್ಕುಗಳಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸುವ ಯೋಚನೆ ಇದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ಹಿಂದೆ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲೇ 20 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಗರದಲ್ಲಿ ವಿತರಿಸಲಾಗಿತ್ತು. ಅವರ ನಾಯಕತ್ವದಲ್ಲಿ ಮತ್ತೆ ನಿವೇಶನ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕ್ರೀಡಾಪಟು ಏಂಜೆಲ್ ಮೇರಿಗೆ ನಿವೇಶನ
ನಗರದ ಅಂತರರಾಷ್ಟ್ರೀಯ ಹಿರಿಯ ಕ್ರೀಡಾಪಟು ಏಂಜೆಲ್ ಮೇರಿ ಅವರಿಗೆ ಕುವೆಂಪು ನಗರದಲ್ಲಿ ನಿವೇಶನವೊಂದನ್ನು ಕೊಡಲು ಜಾಗ ಗುರುತಿಸಲಾಗಿದೆ ಎಂದು ದೂಡಾ ನೂತನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.
ದಿನೇಶ್ ಕೆ. ಶೆಟ್ಟಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾ ಡಿದ ಶಾಸಕ ಬಿ.ಪಿ. ಹರೀಶ್, ಏಂಜೆಲ್ ಮೇರಿ ಅವರು ಅರ್ಜುನ ಪ್ರಶಸ್ತಿ ಪಡೆದ ಹೆಸರಾಂತ ಆಟಗಾರ್ತಿ. ಅವರಿಗೆ ದೂಡಾ ವತಿಯಿಂದ ನಿವೇಶನ ಕೊಡಬೇಕು ಎಂದು ಒತ್ತಾಯಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಕೆ. ಶೆಟ್ಟಿ, ಈಗಾಗಲೇ ನಿವೇಶನ ಗುರುತಿಸಲಾಗಿದೆ. ಮೇರಿ ಅವರಿಗೆ ನಿವೇಶನ ನೀಡುವ ಪ್ರಕ್ರಿಯೆ ನಡೆದಿದೆ ಎಂದರು.
ಪ್ರತಿದಿನ ಸಾರ್ವಜನಿಕರಿಂದ ಅಹವಾಲು
ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಕಡ್ಡಾಯವಾಗಿ ತಾವು ದೂಡಾ ಕಚೇರಿಯಲ್ಲಿದ್ದು, ಸಾರ್ವಜನಿಕರಿಂದ ಕುಂದು-ಕೊರತೆ ಆಲಿಸಲಾಗುವುದು.
-ದಿನೇಶ್ ಕೆ. ಶೆಟ್ಟಿ, ಅಧ್ಯಕ್ಷರು, ದೂಡಾ
ನಗರ, ಗ್ರಾಮಾಂತರಗಳಿಗೆ 1,500 ಮನೆ ಮಂಜೂರು
ನಿವೇಶನ ಉಳ್ಳವರು ತಮ್ಮ ಜಾಗದಲ್ಲಿ ವಸತಿ ಕಟ್ಟಿಕೊಳ್ಳಲು ಸರ್ಕಾರದಿಂದ 1,500 ಮನೆಗಳು ಮಂಜೂರಾಗಿವೆ. ದಾವಣಗೆರೆ ನಗರಕ್ಕೆ 500 ಹಾಗೂ ದಾವಣಗೆರೆ ದಕ್ಷಿಣ ಗ್ರಾಮಾಂತರ ಭಾಗಕ್ಕೆ 1,000 ಮನೆಗಳು ಮಂಜೂರಾಗಿವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ನಿವೇಶನ ಉಳ್ಳವರು ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು ಸಿಗಲಿದೆ. ನಗರದಲ್ಲಿ ಈಗಾಗಲೇ 400 ಅರ್ಜಿಗಳು ಬಂದಿವೆ. ಇನ್ನೂ ನೂರು ಜನರಿಗೆ ಅವಕಾಶವಿದೆ ಎಂದು ಶಾಸಕರು ಹೇಳಿದರು.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಬೇರೆ ಪಕ್ಷದಿಂದ ಬಂದವರನ್ನು ದೂಡಾ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ದೂಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಮಾತ್ರ ಇದು ಸಾಧ್ಯ ಎಂದರು.
ಭದ್ರಾ ಅಣೆಕಟ್ಟೆ ತುಂಬಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಬಾಗಿನ ಅರ್ಪಿಸಲಾಗುವುದು ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಉದ್ಯಮಿ ಎಸ್.ಕೆ. ವೀರಣ್ಣ, ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ದೂಡಾ ಸದಸ್ಯರಾದ ಎಂ. ಮಂಜುನಾಥ, ವಾಣಿ ಬಕ್ಕೇಶ್, ಹೆಚ್. ಗಿರೀಶ್, ಜಬ್ಬಾರ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪಾಲಿಕೆ ಸದಸ್ಯ ಎ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ್, ಕೆ.ಜಿ. ಶಿವಕುಮಾರ್, ಶಾಮನೂರು ಟಿ. ಬಸವರಾಜ್, ಅನಿತಾಬಾಯಿ, ಶಂಭು ಎಸ್. ಉರೇಕೊಂಡಿ ಮತ್ತಿತರರು ಉಪಸ್ಥಿತರಿದ್ದರು.