ಶಿವಮೊಗ್ಗ, ಜು.28- ಮಲೆನಾಡಿನಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆ ಆಗುತ್ತಿರುವುದರಿಂದ ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯವು ಜುಲೈ ತಿಂಗಳಲ್ಲೇ ಭರ್ತಿ ಆಗುವ ಮೂಲಕ ಅಚ್ಚುಕಟ್ಟಿನ ರೈತರಿಗೆ ಸಂತಸ ತಂದಿದೆ.
ಭಾನುವಾರ ಸಂಜೆ ವರದಿ ಪ್ರಕಾರ ಜಲಾಶಯದ ನೀರಿನ ಮಟ್ಟ 182 ಅಡಿ ಆಗಿದ್ದು, 30 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ 1500 ಕ್ಯೂಸೆಕ್ಸ್ ನೀರನ್ನು ನಾಲ್ಕು ಕ್ರೆಸ್ಟ್ ಗೇಟ್ಗಳ ಮೂಲಕ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಗೊತ್ತಾಗಿದೆ.
186 ಅಡಿ ಗರಿಷ್ಟ ಮಟ್ಟದ ಹಾಗೂ 71 ಟಿಎಂಸಿ ಸಾಮರ್ಥ್ಯದ ಭದ್ರಾ ಜಲಾಶಯ ದಲ್ಲೀಗ 64.877 ಟಿಎಂಸಿ ನೀರು ಸಂಗ್ರಹ ವಾಗಿದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿ ಮಾತ್ರ ಬಾಕಿ ಇದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 160 ಅಡಿ ನೀರಿತ್ತು. ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಶಯವನ್ನು ಪೂರ್ತಿ ಪ್ರಮಾಣದಲ್ಲಿ ತುಂಬಿಸಿಲ್ಲ ಎನ್ನಲಾಗಿದೆ.
ಕಾಡಾ ಸಭೆ : ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ತೀರ್ಮಾನ ಮಾಡಲು ಸೋಮವಾರ ಬೆಳಗ್ಗೆ 11 ಗಂಟೆಗೆ ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಕಚೇರಿಯಲ್ಲಿ ಭದ್ರಾ ಐಸಿಸಿ ಸಭೆ ಕರೆದಿದ್ದು, ರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಲಾಗುವುದೆಂದು ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ತಿಳಿಸಿದರು.
ಮಲೆನಾಡಿನಲ್ಲಿ ಶನಿವಾರ ಮಳೆ ಪ್ರಮಾಣ ಕಡಿಮೆ ಆಗಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಇಳಿಕೆ ಆಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 60 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ 52 ಸಾವಿರ ಕ್ಯೂಸೆಕ್ಸ್ಗೆ ಇಳಿಕೆ ಕಂಡಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.