ತೇವಾಂಶ ವಾತಾವರಣಕ್ಕೆ ಈರುಳ್ಳಿಗೆ ನೇರಳೆ ಎಲೆ ಮಚ್ಛೆ ರೋಗ

ತೇವಾಂಶ ವಾತಾವರಣಕ್ಕೆ  ಈರುಳ್ಳಿಗೆ ನೇರಳೆ ಎಲೆ ಮಚ್ಛೆ ರೋಗ

ಜಗಳೂರು ತಾಲ್ಲೂಕಿನ ರೈತರೊಂದಿಗಿನ ಸಂವಾದದಲ್ಲಿ ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ

ಜಗಳೂರು, ಜು.21- ಮೋಡ ಕವಿದ ವಾತಾವರಣ ಹಾಗೂ ಅಧಿಕ ತೇವಾಂ ಶದಿಂದಾಗಿ ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಛೆ ರೋಗ ಬಾಧೆ ಎದುರಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.

ಜಗಳೂರು ತಾಲ್ಲೂಕಿನ ನಿಬಗೂರು, ಕಲ್ಲೇದೇವರಪುರ ಮತ್ತು ಬಸಪ್ಪನಹಟ್ಟಿ ಗ್ರಾಮ ವ್ಯಾಪ್ತಿಯ ಈರುಳ್ಳಿ ತಾಕುಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದರು.

ಪ್ರಸ್ತುತ ಜಗಳೂರು ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ 268 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ  199ಮಿ.ಮೀ ಮಳೆ ಹೆಚ್ಚಾದ ಕಾರಣ ಈರುಳ್ಳಿ ಬೆಳೆದ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಾಗಿದೆ. ಆದ್ದರಿಂದ ಆಲ್ಟರ್‍ನೇರಿಯಾ ಪೋರಿ ಎಂಬ ಶಿಲೀಂಧ್ರದಿಂದ ನೇರಳೆ ಎಲೆ ಮಚ್ಛೆ ರೋಗ ಉಲ್ಬಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಎಲೆಯ ಮೇಲೆ ಸಣ್ಣ ಚುಕ್ಕೆ ಕಾಣಿಸಿಕೊಂಡು ಕ್ರಮೇಣ ಅಂಗಮಾರಿಯ ಲಕ್ಷಣ ಹೊಂದಿ, ಗಿಡದ ಬೆಳೆವಣಿಗೆ ಕುಂಠಿತವಾಗುತ್ತದೆ ಮತ್ತು ಗಡ್ಡೆಯ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಜತೆಗೆ ಇಳುವರಿ ಕುಂಠಿತವಾಗಲಿದೆ ಎಂದು ತಿಳಿಸಿದರು. ಇದರ ನಿಯಂತ್ರಣಕ್ಕೆ ಶಿಲೀಂಧ್ರ ನಾಶಕ ಪ್ರೋಪಿಕೊನೋ ಜೋಲ್ 1 ಮಿಲೀ ಅಥವಾ ಡೈಪೆನ್‍ಕೋನೋಜೋಲ್ 25% ಇಸಿ 1 ಮಿಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಅಂಟು ದ್ರಾವಣ ಹಾಕಿ ಸಿಂಪರಣೆ ಮಾಡಬೇಕು ಎಂದರು.

ಮೇಲು ಗೊಬ್ಬರವಾಗಿ ಸಾರ ಜನಕಯುಕ್ತ ಗೊಬ್ಬರ ಕಡಿಮೆ ಮಾಡಿ, ಸಲ್ಫೇಟ್ ಆಫ್ ಪೊಟ್ಯಾಷ್ ಗೊಬ್ಬರ ವನ್ನು ಪ್ರತೀ ಎಕರೆಗೆ 20 ಕೆ.ಜಿ ನೀಡಬೇಕೆಂದು ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ತಿಳಿಸಿದರು. ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಬಿದರಕೆರೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣ ಮೂರ್ತಿ, ರೈತ ಶಶಿಕುಮಾರ್, ನಾಗರಾಜ, ಗುರುಸಿದ್ದನಗೌಡ ಇದ್ದರು.

error: Content is protected !!