ದಾವಣಗೆರೆ, ಜು.19- ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು.
ಬೆಳೆ ಸಾಲ ಪಡೆದ ರೈತರನ್ನು ಬೆಳೆ ಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು, ಬೆಳೆ ಸಾಲ ಪಡೆಯಲು ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಖಾತೆ ಪುಸ್ತಕ/ ಪಾಸ್ ಪುಸ್ತಕ/ ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆಯನ್ನು ನೀಡಿ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ ನೋಂದಾಯಿಸಲು ವಿನಂತಿಸಿದೆ.
ಅರ್ಜಿಯೊಂದಿಗೆ ಆಧಾರ್ ಸಂಖ್ಯೆ ನಮೂದಿಸಿ, ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತೋಟಗಾರಿಕೆ ಇಲಾಖೆ, ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.