ಬೆಂಬಿಡದೇ ಕಾಡುವ ಪ್ರತಿಕೂಲ ಹವಾಮಾನದಿಂದ ರಕ್ಷಣೆ ಪಡೆಯಲು ಹವಾಮಾನ ಆಧಾರಿತ ವಿಮೆ ಸೌಲಭ್ಯ ಪಡೆಯಲು ಮುಂದಾದ ರೈತರು ತೀವ್ರ ನಿರಾಶೆ ಅನುಭವಿಸಿದ್ದಾರೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪೆನಿಯ ನಿರ್ಲಕ್ಷ್ಯದಿಂದ ರೈತರು ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅನ್ನದಾತರು ತಾವು ಮಾಡದ ತಪ್ಪಿಗೆ, ತೊಂದರೆಗೀಡಾಗಿದ್ದಾರೆ.
ವಾಡಿಕೆ, ಸರಾಸರಿಗಿಂತ ಹೆಚ್ಚು, ಅಥವಾ ಕಡಿಮೆ ಮಳೆ, ಬಿಸಿಲು, ಹಿಮ, ಗಾಳಿಯಿಂದ ಬೆಳೆ ನಷ್ಟವಾದರೆ, ಹವಾಮಾನ ಆಧಾರಿತ ಬೆಳೆವಿಮೆ ರೈತರಿಗೆ ನೆರವಾಗುತ್ತದೆ. ದಾವಣಗೆರೆ ತಾಲ್ಲೂಕಿನಲ್ಲಿ ಅಡಿಕೆ, ದಾಳಿಂಬೆ, ವೀಳ್ಯೆದೆಲೆಗೆ ಹವಾಮಾನ ಆಧಾರಿತ ಬೆಳೆ ವಿಮೆಗೆ ಅವಕಾಶ ಕಲ್ಪಿಸಲಾಗಿತ್ತು.
ಅಡಿಕೆ ಗರಿಷ್ಠ ಪ್ರಮಾಣದ ನಷ್ಟಕ್ಕೀಡಾದಲ್ಲಿ ಹೆಕ್ಟೇರ್ ಒಂದಕ್ಕೆ 1,28,000 ರೂ. ವರೆಗೆ ಪರಿಹಾರ ನೀಡುವುದಾಗಿ ವಿಮಾ ಕಂಪೆನಿ ಘೋಷಿಸಿತ್ತು. 2022ರಲ್ಲಿ ವಿಮೆ ಮಾಡಿದ ರೈತರಿಗೆ ಉತ್ತಮ ಪರಿಹಾರವೂ ದೊರಕಿ ಆಸರೆಯಾಗಿತ್ತು.
ಈ ವರ್ಷ ಅಡಿಕೆಗೆ ಪ್ರತೀ ಗುಂಟೆಗೆ 64 ರೂ. ರಂತೆ ಕಂತು ತುಂಬಬೇಕಿತ್ತು. ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾಗಿತ್ತು. ಹಾಗೂ ಹೀಗೂ ಕಂತಿನ ಹಣ ಜೋಡಿಸಿಕೊಂಡು ವಿಮೆ ಆಸರೆ ಪಡೆಯ ಹೊರಟ ರೈತರಿಗೆ ಹಲ ವಾರು ಸಮಸ್ಯೆಗಳು ಬಾಧಿಸಿದವು. ಬೆಳೆ ಸಮೀ ಕ್ಷೆಯ ಲೋಪಗಳು ರೈತರನ್ನು ಕಂಗಾಲಾಗಿಸಿವೆ.
ಕಂದಾಯ ಇಲಾಖೆ ನಿರ್ಲಕ್ಷ್ಯ ಸಮಸ್ಯೆಗೆ ಕಾರಣ ?
`ಕಂದಾಯ ಇಲಾಖೆಯವರು ಗ್ರಾಮ ಲೆಕ್ಕಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಮಾಡಿಸದೇ ಖಾಸಗಿಯವರಿಗೆ ಪಹಣಿಯೊಂದಕ್ಕೆ 10 ರೂ.ನಂತೆ ಕೊಟ್ಟು ಸಮೀಕ್ಷೆ ನಡೆಸಿದ್ದಾರೆ. ಅವರು ಸರಿಯಾಗಿ ಸಮೀಕ್ಷೆ ಮಾಡದೇ ಮನಸೋ ಇಚ್ಛೆ, ಬೇಕಾಬಿಟ್ಟಿಯಾಗಿ ಸಮೀಕ್ಷೆ ಮಾಡಿ, ಅಪ್ಲೋಡ್ ಮಾಡಿರುವುದರಿಂದ ಸಮಸ್ಯೆಯುಂಟಾಗಿದೆ. ಅಡಿಕೆ ತೋಟವಿದ್ದರೂ ಕೂಡಾ ಮೆಕ್ಕೆಜೋಳ, ಮತ್ತಿತರ ಅಡಿಕೆ ಮಿಶ್ರ ಬೆಳೆ ಇದ್ದರೂ ಪಾಳುಭೂಮಿ ಎಂದು ನಮೂದಿಸಿ ಎಡವಟ್ಟು ಮಾಡಿದ್ದಾರೆ. ಇದ್ಕಕೆ ಯಾರನ್ನು ಕೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಈ ರೀತಿ, ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿಸಬೇಕು, ಇಲ್ಲವಾದರೆ ಬೀದಿಗಿಳಿದು ಹೋರಾಡುತ್ತೇವೆ.
– ಭೀಮಣ್ಣ, ಜಿಲ್ಲಾ ರೈತ ಮುಖಂಡರು, ಆನಗೋಡು
ರೈತರೇ ಬೆಳೆ ಸಮೀಕ್ಷೆ ಮಾಡಬಹುದು
ಕಳೆದ ವರ್ಷ ಫೀಡ್ ಮಾಡಿದ ಬೆಳೆಗೆ ಈ ವರ್ಷ ವಿಮೆ ಮಾಡಲಾಗುತ್ತಿದೆ. 2024ರ ಸಾಲಿಗೆ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಿದೆ. ರೈತರು ಆಪ್ ಡೌನ್ ಲೋಡ್ ಮಾಡಿಕೊಂಡು, ತಾವೇ ತಮ್ಮ ಜಮೀನಿನ ಬೆಳೆ ಫೋಟೋ ತೆಗೆದು ಅಪ್ಲೋಡ್ ಮಾಡಬಹುದು. ರೈತರೆಲ್ಲರೂ ಇದನ್ನೇ ಬಳಸಿಕೊಂಡರೆ ಸಮಸ್ಯೆ ನೀಗಬಹುದು.
– ರೇಷ್ಮಾ ಬಾನು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ದಾವಣಗೆರೆ ತಾಲ್ಲೂಕು.
ದೋಷಪೂರಿತ ಸಮೀಕ್ಷೆ, ಹೇಳೋರು, ಕೇಳೋರು ಇಲ್ಲ
2023ನೇ ವರ್ಷ ಪಹಣಿಯಲ್ಲಿ ನಮೂದಿಸಿದ ಬೆಳೆ ಆಧರಿಸಿ, 2024ನೇ ಸಾಲಿಗೆ ವಿಮೆ ಮಾಡಲಾಗುತ್ತದೆ. ಕಂದಾಯ ಇಲಾಖೆ ಕಳೆದ ವರ್ಷ ಬೇಕಾಬಿಟ್ಟಿಯಾಗಿ ಬೆಳೆ ಸಮೀಕ್ಷೆ ನಡೆಸಿದೆ. ಅಡಿಕೆ ತೋಟವಿದ್ದರೂ, ಮೆಕ್ಕೆಜೋಳ ಎಂದು ನಮೂದಿಸಿದ್ದಾರೆ. ಬೇರೆ ಯಾವುದೋ ಹೊಲದಲ್ಲಿ ನಿಂತು ಫೋಟೋ ತೆಗೆದು ಅಪ್ಲೋಡ್ ಮಾಡಿದ್ದಾರೆ. ನಮಗೆ ಅಂತರ್ಜಾಲ, ಮೊಬೈಲ್ ಜ್ಞಾನವಿಲ್ಲದ್ದರಿಂದ ಅದು ಗೊತ್ತಾಗಲಿಲ್ಲ. ಅಡಿಕೆಗೆ ವಿಮೆ ಕಂತು ಪಾವತಿಸಲು ಹೋದರೆ, ನಿಮ್ಮ ಹೊಲದ ಸಮೀಕ್ಷೆಯಲ್ಲಿ ಅಡಿಕೆ ಅಪ್ಲೋಡ್ ಮಾಡದ ಕಾರಣ ಅಡಿಕೆ ವಿಮೆ ಕಂತು ಸ್ವೀಕರಿಸಲು ಬರುವುದಿಲ್ಲ ಎಂದು ಹಿಂದಕ್ಕೆ ಕಳಿಸಿದರು ಎಂದು ರೈತರು ನೊಂದು ಕೊಳ್ಳುತ್ತಿದ್ದಾರೆ.
ನಾವಲ್ಲ, ನಾವೂ ಅಲ್ಲ : ಸಮಸ್ಯೆ ಸರಿಪಡಿಸಲು ಕೃಷಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ತೋಟಗಾರಿಕೆ ಅಧಿಕಾರಿಗಳನ್ನು ವಿಚಾರಿಸುವಂತೆ ಹೇಳಿ ಕಛೇರಿಯಿಂದ ಸಾಗು ಹಾಕುತ್ತಾರೆ. ನಾವೇನು ಮಾಡ ಲಾಗುವುದಿಲ್ಲ. ಎಲ್ಲಾ ಸಾಫ್ಟ್ವೇರ್ ಫೀಡಿಂಗ್ ಆಗಿದೆ. ನಾವೆಲ್ಲಾ ಸಮೀಕ್ಷೆ ಮಾಡಿದ್ದು, ಕಂದಾಯ ಇಲಾಖೆ ಬೆಳೆ ಸಮೀಕ್ಷೆ ನಡೆಸಿದ್ದು, ಅಲ್ಲಿ ವಿಚಾರಿಸಲು ಹೇಳುತ್ತಾರೆ. ಕಂದಾಯ ಇಲಾಖೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ನಮಗಂತೂ ದಿಕ್ಕೇ ತೋಚದಂ ತಾಗಿದೆ ಎಂದು ಸಿದ್ದನೂರು ಈರಣ್ಣ, ಆನಗೋಡು ಬಸವರಾಜಪ್ಪ ಅಲವತ್ತುಕೊಳ್ಳುತ್ತಾರೆ.
ಕಂದಾಯ ಇಲಾಖೆ ಅನಧಿಕೃತ ವ್ಯಕ್ತಿ ಗಳಿಂದ ಸಮೀಕ್ಷೆ ಮಾಡಿಸಿದ್ದರೂ ಮೇಲ್ಪಟ್ಟವರು ಪರಿಶೀಲಸದೇ ಅನುಮೋದಿಸಿ ದ್ದಕ್ಕೇ ಹೀಗಾಗಿದೆ ಎಂದು ಕೆಲವರು ದೂರುತ್ತಾರೆ. ಜಿಲ್ಲಾಡಳಿತ ಇದರ ಬಗ್ಗೆ ಜಾಗೃತಿ ವಹಿಸಿ ಸರಿಪಡಿಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎನ್ನುತ್ತಾರೆ ರೈತ ಮುಖಂಡ ಮಲ್ಲಾಪುರ ದೇವರಾಜ್, ಹುಚ್ಚವನಹಳ್ಳಿ ಗಣೇಶ್, ಅಣಬೇರು ಅನಿಲ್ ಕುಮಾರ್.
– ಜಿ.ಜಗದೀಶ್, ಮಾಯಕೊಂಡ