ಇನ್ನೂ 2 ತಿಂಗಳು ಡೆಂಗ್ಯೂ ಹಾವಳಿ ಇರಲಿದೆ

ಇನ್ನೂ 2 ತಿಂಗಳು ಡೆಂಗ್ಯೂ ಹಾವಳಿ ಇರಲಿದೆ

ದಾವಣಗೆರೆ, ಜು. 11 – ಮಳೆಗಾಲವಾದ್ದರಿಂದ ಇನ್ನೂ 2 ತಿಂಗಳು ಡೆಂಗ್ಯೂ ಹಾವಳಿ ಇರುತ್ತದೆ. ಜನರು ಹೆಚ್ಚು ಜಾಗೃತರಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯ ಸುತ್ತ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕೂಡ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರತೀ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್‌ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ನಿಜ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿಲ್ಲ ಎಂದರು. ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸುತ್ತಿದೆ. ಬೆಡ್‌ ಅಥವಾ ಔಷಧ ಕೊರತೆಯಿಲ್ಲ. ಡೆಂಗ್ಯೂ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯವರೊಂದಿಗೆ ಚರ್ಚೆ ನಡೆಸಿದ್ದು, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸುವ ಅಗತ್ಯವಿಲ್ಲ ಎಂದು ಸಲಹಾ ಸಮಿತಿ ತಿಳಿಸಿದೆ ಎಂದರು.

ಹೆಚ್ಚು ಡೆಂಗ್ಯೂ ಪ್ರಕರಣ ಕಂಡುಬರುವ ಸ್ಥಳಗಳಲ್ಲಿ ಫೀವರ್‌ ಕ್ಲಿನಿಕ್‌ ತೆರೆದು ಟೆಸ್ಟಿಂಗ್‌ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರು ಹೆಚ್ಚು ಜಾಗೃತರಾಗಿ ಎಚ್ಚರಿಕೆ ವಹಿಸುವುದೇ ಮುಖ್ಯ ಎಂದರು.

ಡೆಂಗ್ಯೂ ಸೊಳ್ಳೆಗಿಂತ ಬಿಜೆಪಿ ನಾಯಕರ ಸುಳ್ಳುಗಳೇ ವೇಗವಾಗಿ ಹರಡುತ್ತಿವೆ. ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆಡಳಿತ ಪಕ್ಷಕ್ಕೆ ಸಹಕರಿಸಬೇಕು. ಆದರೆ ಡೆಂಗ್ಯೂ ಹರಡುವ ಸೊಳ್ಳೆಗಳಿಗಿಂತ ವಿಪಕ್ಷ ನಾಯಕರ ಸುಳ್ಳುಗಳು ಹೆಚ್ಚು ಹರಡುತ್ತಿವೆ ಎಂದು ಬಿಜೆಪಿ ನಾಯಕರ ಹೇಳಿಕೆಗಳನ್ನು ಟೀಕಿಸಿದರು.

ಡೆಂಗ್ಯೂ ರಕ್ತ ಪರೀಕ್ಷೆಗೆ ಸರ್ಕಾರ 300 ರೂ ದರ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಲ್ಯಾಬ್‌ಗಳ ವಿರುದ್ಧ ದೂರು ಕೇಳಿ ಬಂದರೆ, ಅವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಡೆಂಗ್ಯೂ ನಿಯಂತ್ರಣ ಸಂಬಂಧ  ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್ ಕೇಳಿರುವ ಪ್ರಶ್ನೆಗೆ ರಾಜ್ಯ ಸರ್ಕಾರ ಸಮರ್ಪಕ ವರದಿ ನೀಡಲಿದೆ ಎಂದೂ ಅವರು ತಿಳಿಸಿದರು.  ಡೆಂಗ್ಯೂ ರೋಗಿಗಳಿಗೆ ಅಗತ್ಯ ಇರುವ ಪ್ಲೇಟ್‌ಲೇಟ್‌ಗಳನ್ನು ಸರ್ಕಾರವೇ ಉಚಿತವಾಗಿ ನೀಡಲಿದೆ. ಪ್ಲೇಟ್‌ಲೇಟ್‌ಗಳು ಸಿಗುತ್ತಿಲ್ಲ ಎಂದು ಇದುವರೆಗೂ ಯಾವುದೇ ದೂರು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳ ಕುರಿತು ನಮ್ಮಲ್ಲೂ ದಾಖಲೆಗಳಿವೆ. ವಿಧಾನಸಭೆಯಲ್ಲಿ ಮಾತನಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

error: Content is protected !!