ಸೊಳ್ಳೆ ನಿಯಂತ್ರಣಕ್ಕೆ ಮನೆ ಮದ್ದು

ದಾವಣಗೆರೆ, ಜು.10- ಮನೆಯಲ್ಲಿ ಸಿಗುವ ಶುಂಠಿ, ಬೆಳ್ಳುಳ್ಳಿ ಸೇರಿ ದಂತೆ ಇತರೆ ಮನೆ ಮದ್ದುಗಳನ್ನು ಬಳಕೆ ಮಾಡಿ ಸೊಳ್ಳೆಗಳನ್ನು ಮನೆಯಿಂದ ಹೊರ ಹಾಕುವ ಮೂಲಕ ನಿಯಂತ್ರಣ ಮಾಡಬಹುದು ಎಂದು ಕರ್ನಾ ಟಕ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿ ಯೇಷನ್ ಅಧ್ಯಕ್ಷ ಡಾ. ಪ್ರಶಾಂತ್ ಆರಾಧ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ಇಂಚು ಶುಂಠಿ, 10 ತುಂಡು ಬೆಳ್ಳುಳ್ಳಿ, ಎರಡು ಇಂಚು ಚಕ್ಕೆ, 20 ಲವಂಗ ಪುಡಿ ಮಾಡಿ 10 ಬೇವಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಒಂದೂವರೆ ಲೀಟರ್ ನೀರನ್ನು ಬೆರೆಸಿ ಕುದಿಸಿ, ಒಂದು ಲೀಟರ್‌ಗೆ ಬರುವಂತೆ ನೋಡಿಕೊಂಡು ನಂತರ ಆ ನೀರು ತಣ್ಣಗಾದ ಮೇಲೆ ಶೋಧಿಸಿ, 20 ಕರ್ಪೂರಗಳನ್ನು ಪುಡಿ ಮಾಡಿ ಬೆರೆಸಬೇಕೆಂದರು. 10 ಅಜ್ವಾನದ ಎಲೆಗಳನ್ನು ಜಜ್ಜಿ ಅದರಲ್ಲಿ ಬರುವ ರಸವನ್ನು ಮಿಶ್ರಣದಲ್ಲಿ ಬೆರೆಸಿ, ಇವೆಲ್ಲವನ್ನೂ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಮನೆಯ ಒಳಗೆ, ಹೊರಗೆ ಸಿಂಪಡಿಸಿದರೆ ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು ಎಂದರು.

ಡೆಂಗ್ಯೂ ಜ್ವರ ಬಂದವರು, ವೈದ್ಯರು ನೀಡುವ ಔಷಧಿ ಜೊತೆಗೆ ಪಪ್ಪಾಯಿ ಎಲೆಗಳನ್ನು ಕುದಿಸಿ, ಶೋಧಿಸಿ ಕುಡಿಯುವುದರಿಂದ ಜ್ವರ ಕಡಿಮೆಯಾಗಲು ಸಹಕರಿಸುತ್ತದೆ ಎಂದು ತಿಳಿಸಿದರು.

ಬೇವಿನ ಸೊಪ್ಪನ್ನು ರುಬ್ಬಿ, ಕೊಬ್ಬರಿ ಎಣ್ಣೆಯ ಜೊತೆಗೆ ಕುದಿಸಿ, ಹೊರಗಡೆ ಹೋಗುವಾಗ ಚರ್ಮಕ್ಕೆ ಹಚ್ಚಿದಲ್ಲಿ ಸೊಳ್ಳೆಗಳು ಕಚ್ಚುವುದಿಲ್ಲ. ಇದರಿಂದ ಅನೇಕ ಕಾಯಿಲೆಗಳಿಗೂ ಸಹಕಾರಿಯಾಗುತ್ತದೆ ಎಂದರು.

error: Content is protected !!