ಮಕ್ಕಳಲ್ಲಿ ಕ್ಷೀಣವಾಗುತ್ತಿರುವ ಮಾನವೀಯ ಮೌಲ್ಯಗಳು

ಮಕ್ಕಳಲ್ಲಿ ಕ್ಷೀಣವಾಗುತ್ತಿರುವ ಮಾನವೀಯ ಮೌಲ್ಯಗಳು

ವನಿತಾ ಸಮಾಜದ ಅಂಗ ಸಂಸ್ಥೆಗಳಿಂದ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಅವರಿಗೆ ಆತ್ಮೀಯ ಗೌರವ

ದಾವಣಗೆರೆ, ಜು. 9- ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಎಂಸಿಸಿ `ಎ’ ಬ್ಲಾಕ್‌ನ ವನಿತಾ ಸಮಾಜದ `ವಿಮೋಚನಾ’ ಸಂಸ್ಥೆಯ ಸಭಾಂಗಣದಲ್ಲಿ ವನಿತಾ ಸಮಾಜ, ಸೇವಾ-ವನಿತಾ ವೈದ್ಯೆಯರ ವೇದಿಕೆ, ವಿಹಾ ವನಿತ ಪರಿಸರ ವೇದಿಕೆ ಸಹಯೋಗದಲ್ಲಿ ವೈದ್ಯ ದಿನಾಚರಣೆ, ಪರಿಸರ ದಿನಾಚರಣೆ  ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸುವ ಜೊತೆಗೆ ಅವರೊಟ್ಟಿಗೆ ಒಂದಿಷ್ಟು ಸಮಯ ಕಳೆಯುವುದನ್ನು ರೂಢಿಸಿಕೊಂಡಾಗ ಮಧುರವಾದ ಬಾಂಧವ್ಯ ಏರ್ಪಡುತ್ತದೆ ಎಂದ ಅವರು,  ಮಹಿಳೆಯರೂ ಸಹ ತಮ್ಮ ಹಾಗೂ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಬೇಕೆಂದು ಕರೆ ನೀಡಿದರು.

ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರ ವಹಿಸಲಿದ್ದು, ಸದೃಢ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ತರಕಾರಿ, ಹಣ್ಣು ಸೇರಿದಂತೆ ಪೌಷ್ಠಿಕ ಆಹಾರ ಸೇವನೆ ಮಾಡಬೇಕೆಂದು ಸಲಹೆ ನೀಡಿದರು.

ಒಬ್ಬ ಮಹಿಳೆ ವಿದ್ಯಾವಂತಳಾದರೆ, ಇಡೀ ಕುಟುಂಬವೇ ವಿದ್ಯಾವಂತ ಕುಟುಂಬವಾದಂತೆ. ವಿದ್ಯಾವಂತ ಮಹಿಳೆ ಆ ಕುಟುಂಬದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸುತ್ತಾಳೆ. ಸಮಾಜ ಬದಲಾವಣೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು ಎಂದು ಹಿತ ನುಡಿದರು.

ಜನರಿಗೆ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ರಮ ಗಳನ್ನು  ನೀಡಿದಾಗ ಮಾತ್ರ ಅಂತಹ ಸೇವೆ ಸಾರ್ಥಕವಾಗುತ್ತದೆ. ಮಾಜಿ ಸಚಿವರೂ, ವನಿತಾ ಸಮಾಜದ ಸಂಸ್ಥಾಪಕರೂ ಆಗಿದ್ದ ದಿ. ನಾಗಮ್ಮ ಕೇಶವಮೂರ್ತಿ ಅವರು ಮಹಿಳೆಯರಿಗೆ ಶಕ್ತಿಯಾ ಗಿದ್ದರು. ವನಿತಾ ಸಮಾಜ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಮಹಿಳೆಯರ ಬದುಕಿಗೆ ನೆರವಾಗಿದ್ದರು. ಅವರ ಸಮಾಜ ಸೇವಾ ಕಾರ್ಯಗಳು ಅವಿಸ್ಮರಣೀಯ ಎಂದರು.

ವನಿತಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಕಾರ್ಯದರ್ಶಿ, ಫಿಜಿಷಿಯನ್ ಡಾ. ಇ.ಎಂ. ಸುರೇಂದ್ರ, ವನಿತಾ ಪರಿಸರ ವೇದಿಕೆ ಅಧ್ಯಕ್ಷೆ ಡಾ. ಶಾಂತಾ ಭಟ್ ಉಪಸ್ಥಿತರಿದ್ದರು.

ಇದೇ ವೇಳೆ ವನಿತಾ ಸಮಾಜ, ಸೇವಾ-ವನಿತಾ ವೈದ್ಯೆಯರ ವೇದಿಕೆ, ವಿಹಾ ವನಿತಾ ಪರಿಸರ ವೇದಿಕೆ ವತಿಯಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೌರವಿಸಲಾಯಿತು.

ಪ್ರಭಾ ರವೀಂದ್ರ, ರಮಾ ನಾಗರಾಜು ಪ್ರಾರ್ಥಿಸಿದರು. ಡಾ. ಶಾಂತ ಭಟ್ ಸ್ವಾಗತಸಿದರು. ಲತಿಕಾ  ದಿನೇಶ್ ಕೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸರಳಾ ಶಾಂತಿನಾಥ್ ನಿರೂಪಿಸಿದರು. ಡಾ. ಚೈತಾಲಿ, ಗೀತಾ ಬದರಿನಾಥ್ ವರದಿ ವಾಚಿಸಿದರು. ಪದ್ಮಾ ಪ್ರಕಾಶ್ ವಂದಿಸಿದರು.

error: Content is protected !!