ಐರಣಿ ಹೊಳೆಮಠದ ಧರ್ಮಸಭೆಯಲ್ಲಿ ಶ್ರೀ ಚಿದ್ಘನಾನಂದ ಭಾರತಿ ಸ್ವಾಮೀಜಿ
ರಾಣೇಬೆನ್ನೂರು, ಜು. 8- ಉಪಾದಿಯಿಂದ ನಿರುಪಾದಿಯಾಗಿ ಬ್ರಹ್ಮನಲ್ಲಿ ಲೀನವಾದವರಿಗೆ ಹುಟ್ಟು ಸಾವುಗಳಿರುವುದಿಲ್ಲ, ಹುಬ್ಬಳ್ಳಿಯ ಸಿದ್ಧಾರೂಢರು, ಎರಡನೇ ಸಿದ್ಧಾರೂಢರಾದ ಐರಣಿ ಹೊಳೆಮಠದ ಮುಪ್ಪಿನಾರ್ಯ ಸ್ವಾಮೀಜಿ ಮುಂತಾದವರೆಲ್ಲರೂ ಸಾವಿಲ್ಲದವರು, ದೇಹವನ್ನು ತೊರೆದವರು. ಹೀಗಾಗಿ ಅವರ ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಅವು ಆಚರಣೆಗೊಳ್ಳುತ್ತಿವೆ ಎಂದು ಜೋಡಕುರುಳಿ ಸಿದ್ಧಾರೂಢ ಮಠದ ಶ್ರೀ ಚಿದ್ಘನಾನಂದ ಭಾರತಿ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಐರಣಿ ಹೊಳೆಮಠದಲ್ಲಿ ನಡೆದ ಮುಪ್ಪಿನಾರ್ಯ ಶ್ರೀಗಳ 40ನೇ ಪುಣ್ಯಾರಾಧನೆ, ಬಸವರಾಜ ಶ್ರೀಗಳ ಅಂಬಾರಿ ಉತ್ಸವ, ತುಲಾಭಾರ, ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಉಪದೇಶ ನೀಡುತ್ತಿದ್ದರು.
ಬೇಡದೆ, ಭಕ್ತರಿಂದ ಬಂದದ್ದನ್ನು ಸಂಗ್ರಹಿಸಿ ಸರ್ವ ಧರ್ಮದವರ ಉದ್ಧಾರಕ್ಕೆ ಶ್ರಮಿಸಿದ ಸಿದ್ದಾರೂಢರು, ಐರಣಿ ಎರಡನೇ ಹುಬ್ಬಳ್ಳಿ ಆಗಲಿ, ನೀನು ಎರಡನೇ ಸಿದ್ಧಾರೂಢನಾಗಿ ಭಕ್ತರ ಹೃದಯದಲ್ಲಿ ಸಾಮ್ರಾಟನಾಗಿ ನೆಲೆಸು ಎಂದು ಆಶೀರ್ವದಿಸಿದನ್ನು ಹಾಗೂ ಬರಗಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನ ದಾಸಪ್ಪನ ಮಗಳು ಅಕ್ಕಮ್ಮಳಿಂದ ಒಂದು ರೂ. ನಾಣ್ಯ ಪಡೆದು ಅತ್ಯಂತ ಸಂಭ್ರಮದಿಂದ ಜಾತ್ರೆ ಮಾಡಿದ್ದನ್ನು ಚಿದ್ಘನಾನಂದ ಶ್ರೀಗಳು ವಿವರಿಸಿದರು.
ಇವನಾರವ… ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಇವನಾರವ, ಇವ ನಮ್ಮವ ಎಂದು ಘೋಷಣೆ ಹಾಕುವವರಿಂದ ಜಾತೀಯತೆ ಹೋಗಿಲ್ಲ. ಅವರಾರು ವೇದಾಂತಿಗಳನ್ನು, ಜ್ಞಾನಿಗಳನ್ನು ಹುಡುಕಿ ತಮ್ಮ ಪೀಠಗಳಿಗೆ ನೇಮಕ ಮಾಡಲ್ಲ. ತಮ್ಮ ಜಾತಿಯವರನ್ನೇ ಕರೆತಂದು ಪೀಠಾಧಿಕಾರಿ ಮಾಡುತ್ತಾರೆ. ಆದರೆ ಸಿದ್ದಾರೂಢ ಪರಂಪರೆಯಲ್ಲಿ ಜಾತಿ ಇಲ್ಲಾ, ಯಾವುದೇ ಜಾತಿ, ಧರ್ಮದವರು, ಸಿದ್ಧಾರೂಢರ ತತ್ವ, ಸಿದ್ದಾಂತ ಆದರ್ಶಗಳನ್ನು ಪಾಲಿಸುವವರೆಲ್ಲರಿಗೂ ಇಲ್ಲಿ ಅವಕಾಶ ಉಂಟು ಎಂದು ಹುಬ್ಬಳ್ಳಿ ಸಿದ್ದಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ ಹೇಳಿದರು.
ಶ್ರೀ ಬಸವರಾಜ ದೇಶಕೇಂದ್ರ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕುಳ್ಳೂರು ಬಸವಾನಂದ ಶ್ರೀ ಗಳು, ಹದಡಿ ಮುರಳೀಧರ ಶ್ರೀಗಳು, ದಾವಣಗೆರೆಯ ಶಿವಾನಂದ ಶ್ರೀ ಗಳು, ಹರಿಹರದ ಬ್ರಹ್ಮಾನಂದ ಮಠದ ವಿವೇಕಾನಂದ ಶ್ರೀ ಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಧರ್ಮಸಭೆ ಉದ್ಘಾಟಿಸಿದರು. ವೇದಿಕೆಯಲ್ಲಿ ಹುಬ್ಭಳ್ಳಿ ಮಠದ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ರು, ಧರ್ಮದರ್ಶಿ ಸಿದ್ದನಗೌಡ ವೇದಿಕೆಯಲ್ಲಿದ್ದರು.
ಮಠದ ಸಂಚಾಲಕ ಬಾಬು ಶೆಟ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ವಿವಾಹಗಳು, ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ ನಡೆದವು.