ಲದ್ದಿ ಹುಳು ನಿರ್ವಹಣೆಗೆ ಮೋಹಕ ಬಲೆ ಬಳಸಿ

ಲದ್ದಿ ಹುಳು ನಿರ್ವಹಣೆಗೆ ಮೋಹಕ ಬಲೆ ಬಳಸಿ

ಜಗಳೂರು : ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಸಲಹೆ

ಜಗಳೂರು,ಜು.8- ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳದಲ್ಲಿ ಲದ್ದಿ ಉಳುವಿನ ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಕೀಟದ ನಿರ್ವಹಣೆಗಾಗಿ ಸಮಗ್ರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಸಲಹೆ ನೀಡಿದರು.

ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿಯ  ಮುಂಚೂಣಿ ಪ್ರಾತ್ಯಕ್ಷಿಕೆಯ ಅಂಗವಾಗಿ ಲದ್ದಿ ಹುಳುವಿನ ನಿರ್ವಹಣಾ ಪದ್ಧತಿಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ರೈತರನ್ನುದ್ದೇಶಿಸಿ ಮಾತನಾಡಿದ ಅವರು   ಲದ್ದಿ ಹುಳುವಿನ ನಿರ್ವಹಣೆಯನ್ನು ಬಿತ್ತನೆಯಾದ 12 ದಿವಸಗಳ ನಂತರ ಕೈಗೊಳ್ಳಬೇಕು. 

ಸಮಗ್ರ ಕೀಟ ನಿರ್ವಹಣಾ ಪದ್ಧತಿ ಅಡಿಯಲ್ಲಿ ಉತ್ತಮವಾದ ಮಾಗಿ ಉಳಿಮೆ, ಬೀಜೋಪಚಾರ ಹಾಗೂ ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು. ಲದ್ದಿ ಉಳಿವಿನ ನಿರ್ವಹಣೆಗಾಗಿ ಒಂದು ಎಕರೆ ಪ್ರದೇಶಕ್ಕೆ ಮೂರರಿಂದ ಐದು ಮೋಹಕ ಬಲೆಗಳನ್ನು ಅಳವಡಿಸಬೇಕು, ಗಂಡು ಪತಂಗಗಳು ಮೋಹಕ ಬಲೆಗಳಿಗೆ ಆಕರ್ಷಿತಗೊಂಡು, ಬಲೆಯೊಳಗೆ ಬೀಳುವುದರಿಂದ ಸಂತಾನೋತ್ಪತ್ತಿ ಕಡಿಮೆಯಾಗಿ ಕೀಟದ ಬಾಧೆ ಕಡಿಮೆಯಾಗುತ್ತದೆ. 

ಪ್ರಾತ್ಯಕ್ಷಿಕೆಯ ಅಂಗವಾಗಿ ರೈತರಿಗೆ ಮೋಹಕ ಬಲೆಗಳನ್ನು ಕೊಡಲಾಯಿತು.   ಕೀಟಬಾಧೆ ಹೆಚ್ಚಾದಲ್ಲಿ  ಕೀಟನಾಶಕಗಳನ್ನು  ಬಳಸಬಹುದು ಎಂದು ತಿಳಿಸಿದರು.

ಕೇಂದ್ರದ ಮುಖ್ಯಸ್ಥರಾದ ಡಾ. ಟಿ. ಎನ್. ದೇವರಾಜ್  ಮಾತನಾಡುತ್ತಾ, ಏಕ ಬೆಳೆ ಪದ್ಧತಿಯಿಂದ ಕೀಟ ಮತ್ತು ರೋಗಗಳ ಬಾಧೆ ಹೆಚ್ಚಾಗುತ್ತಿದೆ, ಇದನ್ನು ನಿಯಂತ್ರಿಸಲು ಬೆಳೆ ಪರಿವರ್ತನೆ ಕೂಡ ಮಾಡಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಬಿದರಿಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ   ಬಸವನಗೌಡರು ಮತ್ತು ಪ್ರಗತಿಪರ ರೈತರು ಭಾಗವಹಿಸಿದ್ದರು.

error: Content is protected !!