ತಾಯಿ ಗರ್ಭದಿಂದಲೇ `ಸಂಸ್ಕಾರ’ ಲಿಂಗಾಯತ ಧರ್ಮದ ಆಶಯ

ತಾಯಿ ಗರ್ಭದಿಂದಲೇ `ಸಂಸ್ಕಾರ’ ಲಿಂಗಾಯತ ಧರ್ಮದ ಆಶಯ

ಸಾಣೇಹಳ್ಳಿಯ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ 

ಸಾಣೇಹಳ್ಳಿ, ಜು. 2-   ಜೀವನದಲ್ಲಿ ದೀಕ್ಷೆ ಎನ್ನುವಂ ಥದ್ದು ಪ್ರಮುಖ ಘಟ್ಟ. ಸಾಮಾನ್ಯವಾಗಿ ದೀಕ್ಷೆ ತಾಯಿಯ ಗರ್ಭದಿಂದ ಪ್ರಾರಂಭವಾಗಿ ನಂತರ ಬೇರೆ ಬೇರೆ ಹಂತಗ ಳನ್ನು ತಲುಪುವುದು.  ಒಬ್ಬ ತಾಯಿ ಗರ್ಭಿಣಿಯಾದ ಏಳು ತಿಂಗಳಲ್ಲಿ ಸೀಮಂತ ಕಾರ್ಯ ಮಾಡುತ್ತಾರೆ. 

ಆದರೆ ಅದನ್ನು ಲಿಂಗಾಯತ ಧರ್ಮದಲ್ಲಿ ಸೀಮಂತ ಕಾರ್ಯ ಅನ್ನದೇ `ಗರ್ಭಧಾರಣಾ ಸಂಸ್ಕಾರ’ ಅಂತ ಕರೆಯುವರು. ಅಲ್ಲಿಂದಲೇ ಮಗುವಿಗೆ ಸಂಸ್ಕಾರ ಪ್ರಾರಂಭವಾಗಬೇಕು ಎನ್ನುವುದು ಲಿಂಗಾಯತ ಧರ್ಮದ ಆಶಯವಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. 

ಇಲ್ಲಿನ ಶ್ರೀಮಠದಲ್ಲಿ ನಡೆದ ತಿಂಗಳ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ  ಸಾನ್ನಿಧ್ಯ ವಹಿಸಿ  ಶ್ರೀಗಳು ಮಾತನಾಡಿದರು.  

ಸಾಮಾನ್ಯವಾಗಿ ನಾವೆಲ್ಲರೂ ದೇವರಲ್ಲಿ ನಂಬಿಕೆಯನ್ನು ಇಟ್ಟಂಥವರು. ಆ ದೇವರು ಎಲ್ಲಿದ್ದಾನೆ ಎಂದು ಕೇಳಿದರೆ ಯಾವುದೋ ಒಂದು ಮಠ, ದೇವಸ್ಥಾನ, ಧಾರ್ಮಿಕ ಕೇಂದ್ರ ಅಂತ ಹೇಳ್ತೀವಿ. ಶರಣರು ಇದನ್ನು ಒಪ್ಪದೇ ಭಗವಂತ ನಿಮ್ಮೊಳಗಡೆಯೇ ಇರುವನು. ಅವನು ವಿಶ್ವವ್ಯಾಪಿಯಾಗಿದ್ದಾನೆ ಎಂದು ಹೇಳಿ ಅಂಗೈಯೊಳಗೆ ಇಷ್ಟಲಿಂಗವನ್ನು ಕರುಣಿಸಿದರು. 

ಇಷ್ಟಲಿಂಗ ನಮಗೆ ಸ್ಪರ್ಷ ಆಗುವುದರಿಂದ ಆ ಲಿಂಗವೂ ಚೈತನ್ಯವನ್ನು ಪಡೆದುಕೊಂಡಿದೆ. ಹಾಗಾಗಿ ಇಷ್ಟಲಿಂಗವನ್ನು ಜಂಗಮ ಲಿಂಗ ಎಂದು ಕರೆದರೆ ಗುಡಿಯಲ್ಲಿರುವ ಲಿಂಗವನ್ನು ಸ್ಥಾವರ ಲಿಂಗ ಎಂದು ಕರೆಯುವರು. ಹಾಗಾಗಿಯೇ ಶರಣರು ಗುಡಿಯನ್ನು ಬಹಿಷ್ಕಾರ ಮಾಡಿದರು. ಯಾಕೆಂದರೆ ಗುಡಿಯ ದೇವರ ಹೆಸರಿನಲ್ಲಿ ಪೂಜಾರಿ-ಪುರೋಹಿತರು ಅನೇಕ ರೀತಿಯ ಶೋಷಣೆ ಮಾಡುತ್ತಿದ್ದರು.    

ಬಸವಣ್ಣನವರು ಹೇಳಿದಂತೆ ಏಳು ಸೂತ್ರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡಾಗ ಮಾತ್ರ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಆಗ ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಲಿಕ್ಕೆ ಸಾಧ್ಯ. ನಮ್ಮಲ್ಲೂ ಶಿವಚೈತನ್ಯವಿದೆ. ಆ ಶಿವಚೈತನ್ಯವನ್ನು ಕಾಣಲಿಕ್ಕೆ ಇಷ್ಟಲಿಂಗ ಒಂದು ಸಹಕಾರಿ. ಇಷ್ಟಲಿಂಗ ಪೂಜೆ ಮಾಡ್ತಾ ಮಾಡ್ತಾ ನಮ್ಮೊಳಗಡೆ ಚೈತನ್ಯವಿದೆ ಎಂದು ಕಂಡುಕೊಳ್ಳಬೇಕು. ಆ ಚೈತನ್ಯದ ಕುರುಹು ಇಷ್ಟಲಿಂಗ. ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡುತ್ತಾ ಹೋದರೆ ನಮ್ಮ ಬದುಕು ಅರಳುತ್ತಾ ಹೋಗುತ್ತದೆ ಎಂದು ಹೇಳಿದರು.

ಇತ್ತೀಚಿಗೆ ಮಾಧ್ಯಮಗಳಲ್ಲಿ ಬರುವ ಘಟನೆಗಳನ್ನು ನೋಡಿದರೆ ಅಸಹ್ಯವಾಗುತ್ತದೆ.  ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಸಂಸ್ಕಾರ ಬಂದಿದ್ದರೆ ಈ ರೀತಿಯ ಅವಾಂತರಗಳಿಗೆ ಒಳಗಾಗುತ್ತಿರಲಿಲ್ಲ. 

ಹಾಗಾಗಿಯೇ ಮನುಷ್ಯನಿಗೆ ಇಷ್ಟಲಿಂಗ ದೀಕ್ಷೆ ಎನ್ನುವಂಥದ್ದು, ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವಂಥದ್ದು. ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳುವವರಿಗೆ ಲಿಂಗ, ವರ್ಗ, ಜಾತಿ, ಧರ್ಮ, ಪಂಥ, ಪಂಗಡ ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬಹುದು ಎಂದು ಸ್ವಾಮೀಜಿ ತಿಳಿಸಿದರು.

error: Content is protected !!