ದಾವಣಗೆರೆ, ಜೂ. 12 – ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಎರಡೂವರೆ ದಶಕಗಳ ಬಳಿಕ ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ವೀರಭದ್ರಸ್ವಾಮಿ ಮಟ್ಟಿಕಲ್ ಅವರು 108 ತೆಂಗಿನಕಾಯಿ ಒಡೆಯುವ ಮೂಲಕ ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ವೀರಭದ್ರಸ್ವಾಮಿ ಅವರು, ಪ್ರಭಾ ಗೆಲುವಿಗೆ ಪ್ರಾರ್ಥಿಸಿ, ಕಳೆದ ಏಪ್ರಿಲ್ 30ರಂದು ಹಳೇಪೇಟೆಯ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟು ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುಗ್ಗಳದೊಂದಿಗೆ ದೀಡು ನಮಸ್ಕಾರ ಸೇವೆ ಸಲ್ಲಿಸಿದ್ದೆ. ಬಳಿಕ ಬಾಯಿಗೆ ಶಸ್ತ್ರ, ನಾಲಿಗೆಗೆ 108 ಶಿವದಾರ ಧರಿಸಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೆ. ಈ ಹಿಂದೆ ಬಿಜೆಪಿ ಗೆಲ್ಲಲೆಂದು ಪ್ರಾರ್ಥಿಸಿ, ನಾನೇ ಹರಕೆ ಹೊತ್ತು ತೀರಿಸಿದ್ದೆ. ಆದರೆ ಸಿದ್ದೇಶ್ವರರ ದುರಾಡಳಿತಕ್ಕೆ ಬೇಸತ್ತು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿ ಸೋಲಲು ಸಿದ್ದೇಶ್ವರರೇ ಕಾರಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಿಂದುತ್ವದ ಪರ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನಂತೆ ಸಾವಿರಾರು ಜನರು ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದರು. ಅವರೆಲ್ಲರನ್ನೂ ತಿರಸ್ಕಾರ ಮನೋಭಾವದಿಂದ ನೋಡಿದ ಕಾರಣ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಸೋಲು ಕಾಣಬೇಕಾಯಿತು. ಇದು ಸಿದ್ದೇಶ್ವರರ ಕುಟುಂಬದ ಸೋಲು ಅಷ್ಟೇ. ಬಿಜೆಪಿಯ ಸೋಲಲ್ಲ ಎಂದು ತಿಳಿಸಿದರು.
ಹರಕೆ ತೀರಿಸುವ ವೇಳೆ ಕಾಂಗ್ರೆಸ್ ಮುಖಂಡರಾದ ಕಕ್ಕರಗೊಳ್ಳ ಕಲ್ಲಿಂಗಪ್ಪ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರವಿಕುಮಾರ್, ಶಶಿ ಶೇಖರ್, ಅಣಜಿ ಬಸವರಾಜ್, ಕರೂರು ಗಣೇಶ್, ಡಿ. ಕೆ. ರಾಜೇಂದ್ರ, ಸಿರಿಗೆರೆ ಬಸವರಾಜ್, ಅಣಜಿ ಪ್ರಶಾಂತ್, ಕಾಯಿಪೇಟೆ ಹಾಲೇಶಣ್ಣ, ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.