ಮಲೇಬೆನ್ನೂರಿನಲ್ಲಿನ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ನಾಗರಾಜ್ ಕುಲಾಲ್ ಆತಂಕ
ಮಲೇಬೆನ್ನೂರು, ಜೂ. 3- ಇವತ್ತಿನ ಯುವ ಪೀಳಿಗೆ ಬರೀ ತಂಬಾಕು, ಗುಟ್ಕಾ ಮಾತ್ರ ಸೇವನೆ ಮಾ ತ್ತಿಲ್ಲ. ಜೊತೆಗೆ ಗಾಂಜಾ, ಹೆರಾಯಿನ್ ಸೇರಿದಂತೆ ವಿವಿಧ ಮಾದಕಗಳ ಸೇವನೆಯಿಂದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಬೇಸರ ವ್ಯಕ್ತಪಡಿಸಿದರು.
ಅವರು, ಶುಕ್ರವಾರ ಪಟ್ಟಣದ ಸಿದ್ಧಾರೂಢ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದ್ದು, ಅವರ ನಡತೆ, ನೀತಿಯ ಬಗ್ಗೆ ಹಿರಿಯರು ನಿಗಾ ವಹಿಸಬೇಕು. ಇಲ್ಲದಿದ್ದರೆ ಅವರು ಬೀದಿ ಪಾಲು ಆಗುತ್ತಾರೆಂದು ಎಚ್ಚರಿಸಿದರು.
ವಿಶ್ವಸಂಸ್ಥೆ ಹೇಳಿಕೆ ಪ್ರಕಾರ 2ನೇ ದೊಡ್ಡ ಕ್ಯಾನ್ಸರ್ ತಂಬಾಕು ಆಗಿದ್ದು, ಇದರ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ 530 ಕಾರ್ಯಕ್ರಮಗಳನ್ನು ಈ ದಿನ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಾಡಿ ದ್ದೇವೆ ಎಂದು ನಾಗರಾಜ್ ಕುಲಾಲ್ ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ನಾನು ಕೂಡಾ ಸಿಗರೇಟ್ ಸೇವನೆ ಮಾಡುತ್ತಿದ್ದು, ಈಗ ಅದರಿಂದ ಹೊರಬಂದು ಆರೋಗ್ಯ ಉಳಿಸಿಕೊಂಡಿದ್ದೇನೆಂಬ ತೃಪ್ತಿ ನನಗಿದೆ. ಹಾಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸ್ಥಳ ಯೋಜನೆ ಮಾಡದ ಜನಪರ ಕಾರ್ಯಕ್ರಮಗಳು ಉಳಿದಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿ ಜಿಗಳಿಯ ಡಾ. ಎನ್.ನಾಗರಾಜ್ ಮಾತನಾಡಿ, ಹಲ್ಲು ನೋವಿಗೆ ಕೆಲವರು ತಂಬಾಕು ಸೇವನೆ ಮಾಡುವ ಪದ್ಧತಿ ಮೌಢ್ಯದಿಂದ ಕೂಡಿದೆ ಎಂದರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಅಷ್ಟೇ ಅಲ್ಲ. ಹೃದಯಾಘಾತ, ಅನಿಮೀಯಾ, ಥೈರಾಡ್ ಗ್ರಂಥಿಗೆ ಹಾನಿ ಆಗುತ್ತದೆ ಎಂದು ಎಚ್ಚರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಹೆಚ್.ಎಂ.ಸದಾನಂದ್ ಮಾತನಾಡಿ, ಮದ್ಯವ್ಯಸನಿಗಳ ಮನೆಯಲ್ಲಿ ಸಂತೋಷ, ನೆಮ್ಮದಿ ಇರಲ್ಲ ಎಂದರು.
ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ಮಹಿಳೆಯರು ಪ್ರೀತಿಯಿಂದ ಪುರುಷರನ್ನು ದುಶ್ಚಟಗಳಿಂದ ದೂರ ಮಾಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್, ಒಕ್ಕೂಟದ ಅಧ್ಯಕ್ಷೆ ಸುಧಾ, ತಾ. ಜ್ಞಾನ ವಿಕಾಸ ಮೇಲ್ವೆಚಾರಕಿ ಸವಿತಾ, ಮಲೇಬೆನ್ನೂರು ವಲಯದ ಮೇಲ್ವೆಚಾರಕಿ ಸಂಪತ್ ಲಕ್ಷ್ಮಿ ಸೇರಿದಂತೆ ಸಂಘಗಳ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.