ಆಯನೂರು ಮಂಜುನಾಥ್ ಮತ್ತು ಕೆ.ಕೆ. ಮಂಜುನಾಥ್ ಇಬ್ಬರನ್ನೂ ಗೆಲ್ಲಿಸಲು ಶಾಸಕ ಶಾಂತನಗೌಡ ಕರೆ
ಹೊನ್ನಾಳಿ, ಮೇ 27- ಆಯನೂರು ಮಂಜುನಾಥ್ ಮತ್ತು ಕೆ.ಕೆ. ಮಂಜುನಾಥ್ ಅವರನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಪಣ ತೊಡಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮೊನ್ನೆ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಬಂಗಾರಪ್ಪ ಅವರ ವಿರುದ್ಧ ಸಮರ್ಥ ವ್ಯಕ್ತಿ ಸಿಗದಿದ್ದಾಗ ಆಯನೂರು ಮಂಜುನಾಥ್ ಅವರ ಹೆಸರು ಸೂಚಿಸಿ ಬಂಗಾರಪ್ಪನವರ ವಿರುದ್ಧ ಗೆಲ್ಲಿಸಿದ್ದಿರಿ ಎಂದು ಸ್ಮರಿಸಿದರು.
ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ನೌಕರರ ವಿರೋಧಿ ಧೋರಣೆ ತೋರುತ್ತಿದ್ದ ಬಿಜೆಪಿ ಸರ್ಕಾರವು ಹಲವಾರು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದ ಕಾರಣ, ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.
ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಶಿಕ್ಷಕರು ತಮ್ಮ ಬೇಡಿಕೆ ಈಡೇರಿಕೆಗಾಗಿ 148 ದಿನ ಸತತ ಹೋರಾಟ ನಡೆಸಿದ ವೇಳೆ ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಬಗ್ಗೆ ಆಗಿನ ಸಿಎಂ ಬೊಮ್ಮಾಯಿ ಅವರು ಸಂತಾಪವನ್ನೂ ಸೂಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾಭ್ಯಾಸದ ಸಾಲ ಮನ್ನಾ ಮಾಡುವುದು ಸೇರಿದಂತೆ ನೌಕರರ ಹಾಗೂ ಕಾರ್ಮಿಕ ವರ್ಗದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ನಿರುದ್ಯೋಗಿ ಪದವೀಧರರಿಗೆ ಟ್ರೈನಿಂಗ್ ಜೊತೆಗೆ ಸ್ಟೆಫಂಡ್ ಕೊಡಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮೇಲ್ಮನೆಯಲ್ಲಿ ಪಕ್ಷದ ಅಭ್ಯರ್ಥಿಗಳಿದ್ದರೆ ಮಾತ್ರವೇ ಸರ್ಕಾರದ ಬಿಲ್ಗಳು ಪಾಸಾಗುತ್ತವೆ. ಆದ್ದರಿಂದ ಕಾರ್ಯಕರ್ತರು, ಮುಖಂಡರು ನಿಮ್ಮ ಗ್ರಾಮಗಳಲ್ಲಿರುವ ಮತದಾರರ ಮನವೊಲಿಸಿ ಮತ ಹಾಕಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಕರೆ ನೀಡಿದರು.
ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ.ಉಮಾಪತಿ, ಮುಖಂಡರಾದ ಡಾ.ಎಲ್. ಈಶ್ವರ್ನಾಯ್ಕ್, ಎಚ್.ಬಿ. ಶಿವಯೋಗಿ, ಆರ್.ನಾಗಪ್ಪ, ಬಿ. ಸಿದ್ದಪ್ಪ, ಡಿ.ಜಿ. ವಿಶ್ವನಾಥ್, ಸಣ್ಣಕ್ಕಿ ಬಸವನಗೌಡ, ಎಚ್.ಎ. ಗದ್ದಿಗೇಶ್, ಎ.ಆರ್. ಚಂದ್ರಶೇಖರ್, ನರಸಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಜಿಲ್ಲಾ ವೀಕ್ಷಕ ಷಣ್ಮುಖಪ್ಪ ಶಿವಳ್ಳಿ, ಎಚ್.ಎಸ್.ರಂಜಿತ್, ಸುಲೇಮಾನ್ ಖಾನ್, ಜಬ್ಬಾರ್ ಅಲಿ ಖಾನ್, ಅರಕೆರೆ ಮಧುಗೌಡ, ಪ್ರಶಾಂತ್ ಬಣ್ಣಜ್ಜಿ, ಮನೋಜ್ ವಾಲಜ್ಜಿ, ಎಚ್.ಬಿ. ಅಣ್ಣಪ್ಪ, ಚೀಲೂರ್ ವಾಜೀದ್, ಪ್ರಭು ನಾಯ್ಕ್, ದಿಡಗೂರು ತಮ್ಮಣ್ಣ, ಎಚ್.ಎಸ್. ಕೃಷ್ಣಮೂರ್ತಿ ಮತ್ತಿತರರು ಇದ್ದರು.