ಅಸಮಾನತೆ ತೊಲಗಿಸುವುದೇ ಸಾಮಾಜಿಕ ನ್ಯಾಯದ ಗುರಿ

ಅಸಮಾನತೆ ತೊಲಗಿಸುವುದೇ ಸಾಮಾಜಿಕ ನ್ಯಾಯದ ಗುರಿ

ಸಾಮಾಜಿಕ ನ್ಯಾಯ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ

ದಾವಣಗೆರೆ, ಮೇ 27- ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವುದೇ ಸಾಮಾಜಿಕ ನ್ಯಾಯದ ಗುರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ ಹೇಳಿದರು.

ನಗರದ ವನಿತಾ ಸಮಾಜದಲ್ಲಿ ಸೋಮವಾರ ನಡೆದ ಯುವಕ-ಯುವತಿಯರಿಗೆ ಸಾಮಾಜಿಕ ನ್ಯಾಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಮಾಯಕರ ಮೇಲೆ ನಡೆಯುತ್ತಿದ್ದ ಶೋಷಣೆ, ಅಸೂಯೆ ಹಾಗೂ ಅವಕಾಶ ವಂಚಿತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಿಧಾನದಿಂದ ಸಾಧ್ಯ ಎಂದು ಹೇಳಿದರು.

ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳೇ ಸಾಮಾಜಿಕ ನ್ಯಾಯದ ಮೂಲ ತತ್ವ ಹಾಗೂ ಮೂಲ ಆಧಾರಗಳಾಗಿವೆ ಎಂದರು.

ಜಾತಿ ತಾರತಮ್ಯ, ಲಿಂಗ ತಾರತಮ್ಯ ಆಗದಂತೆ ಸಮಾಜದಲ್ಲಿನ ಜನರನ್ನು ಗೌರವದಿಂದ ಕಂಡರೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದಂತಾಗಲಿದೆ ಎಂದು ನುಡಿದರು.

 ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದರೂ ಸೌಲತ್ತುಗಳು ಸಮಾನವಾಗಿ ಹಂಚಿಕೆ ಆಗದಿರುವುದು ದುರಂತದ ಸಂಗತಿ ಎಂದರು. 

ಸಂವಿಧಾನದ ಆಶಯ ಈಡೇರಬೇಕಾದರೆ  ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾನತೆ ಸಾಧಿಸಬೇಕು ಎಂದು ಹೇಳಿದರು.

ಸಮಾಜದಲ್ಲಿನ ಜನ ಇಂದಿಗೂ ಜಾತಿ, ವರ್ಗ, ಧರ್ಮ ಹಾಗೂ ಲಿಂಗದ ಆಧಾರದ ಮೇಲೆ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಬಾಬಣ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ್, ದಸಂಸ ಹಿರಿಯ ಮುಖಂಡ ಎಚ್. ಮಲ್ಲೇಶ್, ಸಾಮಾಜಿಕ ಕಾರ್ಯಕರ್ತೆ ನಸ್ರೀನ್ ಮಿಠಾಯಿ ಇದ್ದರು.

ಆಕ್ಷನ್ ಇನಿಷಿಯೇಟಿವ್ ಫಾರ್ ಡೆವಲಪ್‌ಮೆಂಟ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮ ನಡೆಯಿತು.

error: Content is protected !!