ಮಾನ್ಯರೇ,
ನಗರದ ಹಳೇ ನ್ಯಾಯಾಲಯದ ಎದುರು ಇರುವ ರಸ್ತೆಯು ಒಮ್ಮುಖ ರಸ್ತೆಯಾಗಿದ್ದರೂ ಪ್ರತಿ ದಿನ ಸರ್ಕಾರಿ ಮತ್ತು ಖಾಸಗೀ ಬಸ್ಸುಗಳು ಸಾಲಾಗಿ, ಮೇಲಿಂದ ಮೇಲೆ ಬರುವುದರಿಂದ ಸಾರ್ವಜನಿಕರಿಗೆ ಸರಾಗವಾಗಿ ಚಲಿಸಲು ತುಂಬಾ ಕಠಿಣವಾಗಿರುತ್ತದೆ.
ಸರ್ಕಾರಿ ಬಸ್ ನಿಲ್ದಾಣವು ಉದ್ಘಾಟನೆ ಆಗಿ ತಿಂಗಳು ಕಳೆದಿದ್ದರೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದೇ ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ಉಳಿಸಿಕೊಂಡಿರುವುದು ಜೊತೆಗೆ ಖಾಸಗೀ ಬಸ್ ನಿಲ್ದಾಣ ಉದ್ಘಾಟನೆಗೊಂಡು ವರ್ಷ ಕಳೆದರೂ ಖಾಸಗೀ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ಉಪದ್ರವ ಸ್ಥಿತಿಯು ಎದುರಾಗಿದೆ.
ವಕೀಲರು ತಮ್ಮ ತಮ್ಮ ಕಕ್ಷಿದಾರರ ದಾವೆಗಳನ್ನು ನಡೆಸಲು ಹಳೇ ನ್ಯಾಯಾಲಯಗಳ ಸಂಕೀರ್ಣದಿಂದ ಹೊಸ ನ್ಯಾಯಾಲಯಗಳ ಸಂಕೀರ್ಣದ ಕಡೆಗೆ ಸರಿಯಾದ ಸಮಯಕ್ಕೆ ಹೋಗಲು ಆಗದೇ ಟ್ರಾಫಿಕ್ ಜಾಮ್ ಕಾರಣದಿಂದಾಗಿ ತೀವ್ರ ಸಮಸ್ಯೆಯು ಇರುತ್ತದೆ. ಬಸ್ಸುಗಳು ತನ್ನ ನಿಲ್ದಾಣದಿಂದ ಹೊರ ಬಂದು ರಸ್ತೆಯಲ್ಲಿಯೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸನ್ನಿವೇಶಗಳು ಸಾಮಾನ್ಯವಾಗಿವೆ. ಇದರಿಂದಾಗಿ ಅನಾವಶ್ಯಕವಾಗಿ ಟ್ರಾಫಿಕ್ ಜಾಮ್ ಉಲ್ಬಣಿಸುತ್ತದೆ. ಆದ್ದರಿಂದ ದಯವಿಟ್ಟು ಈಗಾಗಲೇ ಮರು ನಿರ್ಮಾಣಗೊಂಡು ಕಾದು ಕುಳಿತಿರುವ ಖಾಸಗೀ ಮತ್ತು ಸರ್ಕಾರಿ ಬಸ್ ನಿಲ್ದಾಣಗಳನ್ನು ಶೀಘ್ರವಾಗಿ ಪೂರ್ಣಪ್ರಮಾಣದಲ್ಲಿ ತೆರೆದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಂಡಬೇಕೆಂದು ವಿನಂತಿ.
– ವಾದಿರಾಜ ಭಟ್ ವೈ., ವಕೀಲರು, ದಾವಣಗೆರೆ.