ಚನ್ನಗಿರಿ ತಾಲ್ಲೂಕಿನಲ್ಲಿ ಶಾಸಕ ಬಸವರಾಜು ವಿ. ಶಿವಗಂಗಾ ನೇತೃತ್ವದಲ್ಲಿ ಮತ ಯಾಚನೆ
ಚನ್ನಗಿರಿ, ಮೇ 5- ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ನುಗ್ಗಿಹಳ್ಳಿ, ಕೊರಟಿಕೆರೆ, ದೇವರಹಳ್ಳಿ ಹಾಗೂ ಹೊದಿಗೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತು, ರಾಜ್ಯದಲ್ಲಿನ ಜನ ಕಾಂಗ್ರೆಸ್ ಆಡಳಿತ ಮೆಚ್ಚಿದ್ದಾರೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಚನ್ನಗಿರಿ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಸುತ್ತಿದ್ದು, ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಂದರೆ ಉತ್ತಮ ಆಡಳಿತ ಮಾಡಲಿದೆ ಎಂಬ ನಂಬಿಕೆ ಜನರಲ್ಲಿದೆ ಎಂದು ಹೇಳಿದರು.
ಚನ್ನಗಿರಿ ಕ್ಷೇತ್ರದಿಂದ ಅತೀ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಲಿವೆ. ಏಕೆಂದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದು, ಈ ಚುನಾವಣೆಯಿಂದ ಮತ್ತಷ್ಟು ಹೊಸ ಬದಲಾವಣೆ ಆಗಲಿದೆ ಎಂದರು.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್‍ಗೆ ಹೋಗಲು ಸಮರ್ಥರಿದ್ದಾರೆ. ಕೇಂದ್ರದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವ ಜ್ಞಾನ, ಕೌಶಲ್ಯ ಹೊಂದಿದ್ದಾರೆ. ಇಂಥ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಮನೆಗೂ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಮನವರಿಕೆ ಮಾಡಲು ತಿಳಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ಯೋಗೇಶ್, ಬಂಡಿ ಸತೀಶ್ ಕುಮಾರ್, ವಿಜಿ ಗೌಡ್ರು, ಗಿರೀಶ್, ರುದ್ರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರಿದ್ದರು.