ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು
ಬಾಳೆಹೊನ್ನೂರು, ಮಾ. 27 – ಸುಖ,ಶಾಂತಿದಾಯಕ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಸ್ತ್ರದ ಭಯ ಇರಬೇಕಂತೆ. ಇವೆರಡನ್ನೂ ಮನುಷ್ಯ ಮೀರಿ ನಡೆಯುತ್ತಿರುವ ಕಾರಣ ಜೀವನದಲ್ಲಿ ಶಾಂತಿ, ನೆಮ್ಮದಿಯಿಲ್ಲ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನೈತಿಕ ಮೌಲ್ಯಗಳ ಸಂರಕ್ಷಣೆಯ ಅಗತ್ಯತೆ ಬಹಳಷ್ಟಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗ ವಾಗಿ ಜರುಗಿದ ನೈತಿಕ ಮೌಲ್ಯಗಳ ಸಂರಕ್ಷಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾ ದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುವುದು. ಜೀವನ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ, ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಅವರವರ ಬದುಕಿನಲ್ಲಿ ಅಳವಡಿಸಿಕೊಂಡ ನೀತಿ ನಿಯತ್ತುಗಳೇ ಕಾರಣವಾಗುತ್ತವೆ ಎಂದು ಉದಾಹರಣೆಗಳೊಂದಿಗೆ ಹೇಳಿದರು.
ಭೌತಿಕ ಬದುಕಿನ ಸಂಪನ್ಮೂಲಗಳಲ್ಲಿ ಸಿರಿ ಸಂಪತ್ತಿನ ಸಂಗ್ರಹ ಮಾನವನಿಗೆ ಸಂತೃಪ್ತಿ ತಂದು ಕೊಡಲಾರವು. ಇದರೊಂದಿಗೆ ಒಂದಿಷ್ಟಾದರೂ ಅಧ್ಯಾತ್ಮ ಚಿಂತನೆ ಇರಬೇಕಾಗುತ್ತದೆ. ಇಂದು ಎಲ್ಲೆಡೆ ಶಾಂತಿಗಾಗಿ ಹುಡುಕಾಟ ನಡೆದಿದೆ. ಆದರೆ ಕಳೆದು ಹೋದ ಸ್ಥಾನದಲ್ಲಿಲ್ಲ. ಬೇರೆಲ್ಲಿಯೋ ಅನ್ವೇಷಣೆ ನಡೆಯುತ್ತಿದೆ. ಮಂತ್ರ, ತೀರ್ಥ, ಗುರು, ದೈವ, ದೇವರು ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟುಕೊಂಡು ನಡೆಯುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ರೀಗಳು ಪ್ರತಿಪಾದಿಸಿದರು.
ನೀತಿಯಿಲ್ಲದ ಶಿಕ್ಷಣ ಭೀತಿ ಇಲ್ಲದ ಶಾಸನ, ಮಿತಿ ಇಲ್ಲದ ಜೀವನ, ಸೀಮಾತೀತವಾದ ಸ್ವಾತಂತ್ರ್ಯ ಇವು ರಾಷ್ಟ್ರ ವಿಘಾತಗಳೆಂದು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ನಿರೂಪಿಸಿದ್ದನ್ನು ಯಾರೂ ಮರೆಯಲಾಗದು ಎಂದು ನುಡಿದರು.
ಸಮಾರಂಭವನ್ನು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ಮೈಸೂರು ಜಪದಕಟ್ಟಿ ಮಠದ ಡಾ|| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಸ್ವಸ್ಥ ಸಮಾಜ ಕಟ್ಟಿ ಬೆಳೆಸಲು ನೈತಿಕ, ನೀತಿ, ರೀತಿಗಳ ಪರಿಪಾಲನೆಯ ಅಗತ್ಯವಿದೆ. ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಅನ್ಯಾಯ, ಅಸತ್ಯ, ಹೇಳುವ ಜನರು ಹೆಚ್ಚಿರುವಾಗ ಸತ್ಯವಂತರು ಸುಮ್ಮನಿರುವ ಕಾಲ ಬಂದಿದೆ. ಸರ್ವೋದಯದ ಬಾಳಿಗೆ ಸಂತ ಮಹಾಂತರು ಶ್ರಮಿಸಿದ್ದಾರೆ. ಅನ್ನ ದಾನ, ವಿದ್ಯಾ ದಾನ ಮಾಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೈಚಾರಿಕತೆಯ ಹೆಸರಿನಲ್ಲಿ ಸತ್ಯ, ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ನಿರ್ಲಕ್ಷ ಮನೋಭಾವ ಹೆಚ್ಚುತ್ತಿದೆ. ಎಲ್ಲಿ ನೋಡಿದಲ್ಲಿ ಮೋಸ ವಂಚನೆ ಕುಯುಕ್ತಿ ಜನರು ಹೆಚ್ಚುತ್ತಿರುವಾಗ ಸಾತ್ವಿಕರು ಮೌನ ವಹಿಸುವುದು ಅನಿವಾರ್ಯವಾಗಿದೆ. ಮಾತಿನಿಂದಲೇ ಸ್ವರ್ಗ ತೋರಿಸಬಲ್ಲೆ ಎಂದು ಹೇಳುವವರು ಇರುವಾಗ ಸಾಧನೆ, ಶ್ರಮ ವಹಿಸಿ ಕೆಲಸ ಮಾಡುವವರನ್ನು ಗುರುತಿಸುವವರು ಬಹಳ ವಿರಳರಾಗಿದ್ದಾರೆ. ಸಾತ್ವಿಕ ತಾತ್ವಿಕ ಮೌಲ್ಯಾಧಾರಿತ ಚಿಂತನಗಳನ್ನು ಸಂರಕ್ಷಿಸುವ ಅವಶ್ಯಕತೆ ಬಹಳಷ್ಟಿದೆ ಎಂದರು.
ಬೀರೂರು ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ನುಡಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶಂಕರ ದೇವರ ಮಠ ಚಿಕ್ಕಮಗಳೂರು, ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಕಿಲ್ಲಾ ಬೃಹನ್ಮಠ ರಾಯಚೂರು, ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀನಿವಾಸ ಸರಡಗಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಪೇಟೆ ರಾಯಚೂರು ಇವರು ನುಡಿ ತರಂಗದಲ್ಲಿ ಉಪದೇಶಾಮೃತ ನೀಡಿದರು.
ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಮುಕ್ತಿ ಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.
ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಚನ್ನಗಿರಿ, ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿ ಗಳು ಹಿರೇಮಠ ಚಳಗೇರಿ, ತೆಂಡೆಕೇರೆ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿ ಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಕನ್ನೂರು-ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಗುರುಲಿಂಗಯ್ಯ ಹಿರೇಮಠ ಹಿತ್ತಲಶಿರೂರ ಇವರಿಂದ ಭಕ್ತಿ ಗೀತೆ ಜರುಗಿತು. ಶ್ರೀ ರಂಭಾಪುರಿ ಪೀಠದ ಗಿರಿಜಾ ಕಲ್ಲೋಳಿ ಮಠ ಮತ್ತು ಲಾವಣ್ಯ ಮಂಜುನಾಥ ನಿರೂಪಿಸಿದರು.