ಕೊಟ್ಟೂರು ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಬ್ಬಾಳು ಶ್ರೀ
ದಾವಣಗೆರೆ,ಮಾ.1- ಪಾದಯಾತ್ರೆ ಯಲ್ಲಿ ಎಷ್ಟು ಜನ ಭಕ್ತರು ಪಾಲ್ಗೊಳ್ಳು ತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ಶ್ರದ್ಧಾ ಭಕ್ತಿಯಿಂದ ಭಾಗವಹಿಸುವುದಷ್ಟೇ ಅಲ್ಲದೇ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಎಚ್ಚರವಹಿಸುವ ಅಗತ್ಯವಿದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.
ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ದಾವಣಗೆರೆಯಿಂದ ಕೊಟ್ಟೂರಿಗೆ ಹಮ್ಮಿಕೊಂಡಿದ್ದ 45 ನೇ ವರ್ಷದ `ಸಮಗ್ರ ಪಾದಯಾತ್ರೆಯ ಬೀಳ್ಕೊಡುಗೆ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇದೀಗ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಲೇ 35-36 ಡಿಗ್ರಿ ಬಿಸಿಲು ದಾವಣಗೆರೆ ಜಿಲ್ಲೆಯಲ್ಲಿದೆ. ಈ ಸಂದರ್ಭದಲ್ಲಿ ಕೊಟ್ಟೂರಿಗೆ ಪಾದಯಾತ್ರೆ ಮಾಡುತ್ತಿರುವ ಭಕ್ತರು ಬರಿಗಾಲಿನಲ್ಲಿ ಹೋಗದೇ ಸುರಕ್ಷತೆ ದೃಷ್ಟಿಯಿಂದ ಪಾದರಕ್ಷೆಯನ್ನು ಬಳಕೆ ಮಾಡಿದರೆ ತಪ್ಪೇನಿಲ್ಲ. ಕೊಟ್ಟೂರೇಶ್ವರ ನಿಮಗೇನು ಶಾಪ ಹಾಕುವುದಿಲ್ಲ. ಶ್ರದ್ಧಾ ಭಕ್ತಿ ಮುಖ್ಯ. ಹೋದ ವರ್ಷಕ್ಕೂ ಈ ವರ್ಷಕ್ಕೂ ವ್ಯಕ್ತಿಯ ಆಚಾರ, ವಿಚಾರ, ನಡೆ-ನುಡಿಯಲ್ಲಿ ಏನು ಬದಲಾವಣೆ ಆಗಿದೆ ಎನ್ನುವುದನ್ನು ಆವಲೋಕಿಸಬೇಕಾಗಿದೆ ಎಂದು ಹೇಳಿದರು.
ಪಂಡರಾಪುರಕ್ಕೆ ಪಾದಯಾತ್ರೆ ಹೋಗುವ ಭಕ್ತರು ತಂಡೋಪ ತಂಡವಾಗಿ ಕೊರಳಲ್ಲಿ ತಾಳವನ್ನು ನೇತುಹಾಕಿಕೊಂಡು, ತಂಬೂರಿ ಮತ್ತು ಡೋಲು ಹಿಡಿದು ಭಕ್ತಿಯಿಂದ ಭಜನೆ ಮಾಡುತ್ತಾ, ಧ್ಯಾನದಲ್ಲಿ ನಿರತರಾಗಿರುತ್ತಾರೆ. ಆ ರೀತಿಯ ಭಜನೆ ಮಾಡುವುದಾಗಲಿ, ಧ್ಯಾನದಲ್ಲಿ ನಿರತರಾಗಿ ರುವುದನ್ನು ಕೊಟ್ಟೂರು ಪಾದಯಾತ್ರಿಗಳಲ್ಲಿ ಕಾಣಲು ಸಾಧ್ಯವಿಲ್ಲ. ದಾನಿಗಳು ನೀಡಿದ ಪ್ರಸಾದ, ನೀರು, ಔಷಧೀಯ ವಸ್ತುಗಳನ್ನು ಅಪವ್ಯಯ ಮಾಡುವುದಲ್ಲದೇ, ಎಲ್ಲೆಂದರಲ್ಲಿ ಬಿಸಾಡುವ ಪರಿಪಾಠವಿದೆ. ಇದನ್ನು ಬಿಡಬೇಕು. ಸ್ವಚ್ಛತೆ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಗಮನವಿರಬೇಕೆಂದರು.
ಅವಶ್ಯವಿರುವಷ್ಟನ್ನು ಮಾತ್ರ ಪ್ರಸಾದವಾಗಲೀ, ನೀರಾಗಲೀ, ಔಷಧಿಯನ್ನಾಗಲೀ ಬಳಕೆ ಮಾಡಿ, ಶ್ರದ್ಧಾ ಭಕ್ತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊ ಳ್ಳುವ ಮೂಲಕ ಶ್ರೀ ಕೊಟ್ಟೂರೇಶನ ಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.
ಕೂಡ್ಲಿಗಿ ತಾಲ್ಲೂಕು ಅಯ್ಯನಹಳ್ಳಿ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೊಟ್ಟೂರು ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ಬಾರಿಯ ಬಿರು ಬಿಸಿಲು ಇದ್ದು, ಪಾದಯಾತ್ರೆ ಎಷ್ಟು ಮುಖ್ಯವೋ, ಮನುಷ್ಯನಿಗೆ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗುತ್ತದೆ ಎಂದರು.
ಕೊಟ್ಟೂರೇಶ್ವರನ ಆಶೀರ್ವಾದ ಬೇಡುವ ಮೂಲಕ ಭಕ್ತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯದ ಕಡೆ ಕಾಳಜಿ ಇರಲಿ. ನೀರನ್ನು ಹಿತ, ಮಿತವಾಗಿ ಬಳಸಿರಿ, ಯಾವುದನ್ನೂ ಸಹ ಅಪವ್ಯಯ ಮಾಡದಿರಿ ಎಂದು ಹಿತ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೆಕ್ಕ ಪರಿಶೋಧಕರೂ ಆದ ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಮಾತನಾಡಿ, ಭಕ್ತ ಸಮೂಹ ಕೊಟ್ಟೂರು ಪಾದಯಾತ್ರೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದು, ದಾನಿಗಳು ನೀಡುವ ಪ್ರಸಾದ, ನೀರು, ತಂಪು ಪಾನೀಯ, ಔಷಧಿ ವಸ್ತುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕೊಟ್ಟೂರು ಶ್ರೀ ಗುರುಬಸ ವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ವೀರಶೈವ ಕೋ-ಆಪ್ ಸೊಸೈಟಿ ಅಧ್ಯಕ್ಷ ಅಜ್ಜಂಪುರಶೆಟ್ರು ಮೃತ್ಯುಂ ಜಯ, ಡಾ. ಜಿ.ಸಿ. ಬಸವರಾಜ್, ಟಿ.ಜಿ. ಬಕ್ಕೇಶಪ್ಪ, ವಿನುತಾ ರವಿ, ಶಿವಯೋಗಿ, ಜಯರಾಜ್, ಮಲ್ಲಾಬಾದಿ ಗುರುಬಸವ ರಾಜ್, ಬಿ. ಚಿದಾನಂದ್, ಆರ್.ಜಿ. ದತ್ತರಾಜ್ ಮತ್ತಿತರರು ಉಪಸ್ಥಿತರಿದ್ದರು.