ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ
ದಾವಣಗೆರೆ, ಫೆ.5- ಪಾಲಕರು ತಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ, ಮಕ್ಕಳು ಮತ್ತು ಪಾಲಕರ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ ಎಂದು ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿ ಕಾರಿ ಡಾ.ಪುಷ್ಪಲತಾ ಅಭಿಪ್ರಾಯಿಸಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಮತ್ತು ಸಮಾಜದ ಪಾತ್ರ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಆದ್ದರಿಂದ ಕೆಲಸದ ಒತ್ತಡದ ನಡುವೆಯೂ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಅಗತ್ಯವಿದೆ. ತಮ್ಮ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸಿ ಪ್ರೋತ್ಸಾಹ ನೀಡಬೇಕು. ಅವರಲ್ಲಿನ ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಿ ಸಕಾರಾತ್ಮಕತೆ ಹೆಚ್ಚಿಸಬೇಕು. ಅಂಕದ ಬಗ್ಗೆ ತಾಳ್ಮೆಯಿಂದ ವರ್ತಿಸಿ, ಮಕ್ಕಳಿಗೆ ಆಸ್ತಿ ಗಳಿಸಿಡುವ ಬದಲು ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಸಮರ್ಥ ತಂದೆ- ತಾಯಿ ಮಾತ್ರ ತಮ್ಮ ಮಕ್ಕಳ ಸಾಮರ್ಥ್ಯವನ್ನು ಗುರುತಿಸಬಲ್ಲರು. ಸರ್ವತೋಮುಖ ಬೆಳವಣಿಗೆ ಎನ್ನುವುದು ಬರೀ ಅಂಕಗಳ ಮೇಲೆ ಅವಲಂಬಿಸಿರುವುದಿಲ್ಲ, ಇಡೀ ವ್ಯಕ್ತಿತ್ವವನ್ನು ಪ್ರಭಾವಿಸು ವಂತದ್ದಾಗಿರುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯಬೇಕು.
ಮಕ್ಕಳ ವ್ಯಕ್ತಿತ್ವ ಬಾಲ್ಯದಿಂದಲೇ ರೂಪು ಗೊಂಡರೆ ಅದರ ಫಲಶೃತಿ ದೊರೆಯುವುದು ಇಡೀ ಸಮಾಜಕ್ಕೆ ಆಗಿರುತ್ತದೆ. ವ್ಯತಿರಿಕ್ತವಾದರೆ ವಯಸ್ಸಾದ ಮೇಲೆ ವೃದ್ಧಾಶ್ರಮಕ್ಕೆ ಹೋಗ ಬೇಕಾದ ಪರಿಸ್ಥಿತಿ ಬರಬ ಹುದು ಎಂದು ಪೋಷಕ ರನ್ನು ಡಾ.ಪುಷ್ಪಲತಾ ಎಚ್ಚರಿಸಿದರು.
ಅಲ್ಲದೆ ಮಕ್ಕಳ ಪಾಲನೆ ಯಲ್ಲಿ ವೈದ್ಯರ ಪಾತ್ರವೂ ಬಹಳ ಮುಖ್ಯವಾಗಿದ್ದು, ಪಾಲಕರು ಮಕ್ಕಳ ಅನಾರೋಗ್ಯದ ಬಗ್ಗೆ ಭಯಪಡದೇ ವೈದ್ಯರ ಸಹಾಯ ಪಡೆಯಿರಿ ಎಂದು ತಿಳಿಸಿದರು.
ಬಾಪೂಜಿ ಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಾಗಾರದ ಉದ್ದೇಶ ವಿವರಿಸಿದರು. ಡಾ. ಕೌಜಲಗಿ, ಡಾ.ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಕಾರ್ಯಕ್ರಮದ ಸಂಯೋಜಕಿ ಸಿ.ಎಂ.ಅಂಜಲಿ ಸೇರಿದಂತೆ, ಆಸ್ಪತ್ರೆ ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.