ಹರಿಹರ, ಫೆ.5- ದೇಶದ ಜನರು ನೆಮ್ಮದಿ ಮತ್ತು ಸುರಕ್ಷಿತವಾಗಿ ಜೀವನವನ್ನು ನಡೆಸುವುದಕ್ಕೆ ಅಧ್ಯಾತ್ಮಿಕ ಭಾವನೆಗಳನ್ನು ಮತ್ತು ಧರ್ಮನಿಷ್ಟೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲಿಕ್ಕೆ ಹೋಮ, ಹವನ ಮುಂತಾದ ಪೂಜಾ ಕಾರ್ಯಗಳು ಸಹಕಾರಿಯಾಗುತ್ತವೆ ಎಂದು ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರಾದ ಮಹಾಮಂಡಲೇಶ್ವರ ಓಂ ಶ್ರೀ ಮಾತಾ ವಿದ್ಯಾನಂದ ಸರಸ್ವತಿ ಗುರೂಜೀ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಅಮರಾವತಿ ಕಾಲೋನಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಜಗಜ್ಯೋತಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ವತಿಯಿಂದ ಲೋಕ ಕಲ್ಯಾ ಣಾರ್ಥ ಮಹಾ ಚಂಡಿಕಾ ಹೋಮ, ಶ್ರೀ ಚಕ್ರನವಾವರಣ ಹೋಮ, ಗಣಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಮಳೆ ಇಲ್ಲದೆ ಬೆಳೆಗಳು ನಾಶಕ್ಕೆ ಕಾರಣವಾದಾಗ, ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾದಾಗ, ಹಲವಾರು ಬಗೆಯ ತೊಂದರೆಗಳನ್ನು ಸಂಭವಿಸಿದ ಸಮಯದಲ್ಲಿ ಋಷಿಮುನಿಗಳು, ಸಾಧು ಸಂತರು ದೇಶವು ಸುಶಿಕ್ಷಿತವಾಗಿ ಇರುವಂತೆ ಮಾಡುವುದಕ್ಕೆ ವಿವಿಧ ಬಗೆಯ ಹೋಮ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಹಿಂದಿ ನಿಂದಲೂ ನಡೆದುಕೊಂಡ ಬಂದಿರುವ ಪದ್ದತಿಯಾಗಿದೆ.
ಆ ದೃಷ್ಟಿಯಿಂದ ಈಗಾಗಲೇ ರಾಜ್ಯದಲ್ಲಿ ಮಳೆ ಇಲ್ಲದೆ ರೈತರಿಗೆ, ಪಶುಪಕ್ಷಿಗಳಿಗೆ ಎಲ್ಲಾ ಬಗೆಯ ಜೀವರಾಶಿಗಳಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ರಾಜ್ಯದ ಜನತೆಯ ಒಳಿತಿಗಾಗಿ ಇಂದು ಪಂಚ ಮಹಾಯಜ್ಞ ಚಂಡಿಕಾ ಹೋಮ, ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ರಾಘವೇಂದ್ರ ಸ್ವಾಮಿ ಮಠದ ಮಹಿಳಾ ಭಜನೆ ತಂಡದವರಿಂದ ಭಜನೆ ನಡೆಸಲಾಯಿತು. ಶಾಸಕ ಬಿ. ಪಿ. ಹರೀಶ್ ಹೋಮ, ಹವನ ಪೂಜೆಯಲ್ಲಿ ಪಾಲ್ಗೊಂಡು, ವೇದಿಕೆಯ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಓಂ ಸಾಯಿ ಶ್ರೀ ಬಸವ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅಮರಾವತಿ ಪರಮೇಶ್ವರ ಗೌಡ್ರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಂತ ಸಮಿತಿಯ ಪ್ರಾಂತ ಸಹ ಅಧ್ಯಕ್ಷ ಓಂ ಶ್ರೀ ಮಾತಾ ಶಿವಜ್ಞಾನಮಯಿ ಸರಸ್ವತಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ, ಸಂದೀಪ್ ಗುರೂಜಿ, ಕವಿರಾಜ್ ಅವಧೂತ ಗುರೂಜಿ, ಸಂತ ಸೇವಾ ಸಮಿತಿಯ ರಾಜ್ಯ ಸಂಚಾಲಕ ವೀರೇಶ್ ಅಜ್ಜಣ್ಣನವರ್, ಅಮರಾವತಿ ಮಹಾದೇವಪ್ಪ ಗೌಡ್ರು, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ , ಡಿ. ಹೇಮಂತರಾಜ್, ಪರಶುರಾಮ್ ಬದಿ, ಕರಿಬಸಪ್ಪ ಕಂಚಿಕೇರಿ, ಧರ್ಮಸ್ಥಳ ಸಂಘದ ಗಣಪತಿ ಮಾಳಂಜೆ, ಸಂತೋಷ ಬಾಲಚಂದ್ರ ಕಾಮತ್ , ವಿಭಾಗ ಸಂಚಾಲಕ ಯೋಗೇಶ್, ಪ್ರಮೀಳಾ ನಲ್ಲೂರು, ಅಂಬುಜಾ ಪಿ ರಾಜೊಳ್ಳಿ, ರೂಪಾ ಕಾಟ್ವೆ, ಕವಿತಾ ಎಸ್ ಪೇಟೆಮಠ, ಗೋವಿಂದ ಮೆಹಂದಳೆ, ಪವನ್ ಆಚಾರ್ಯ, ಕತ್ತಲಗೇರೆ ವೀರೇಶ್, ಜಿ.ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.