ನಗರದಲ್ಲಿ ಇಂದು ನೂಪುರ ನೃತ್ಯೋತ್ಸವ

ದಾವಣಗೆರೆ, ಡಿ. 9- ನಗರದ ನೂಪುರ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಳೆ ದಿನಾಂಕ 10 ರ ಭಾನುವಾರ ಸಂಜೆ 6 ಕ್ಕೆ ನಗರದ ಸಿದ್ಧಗಂಗಾ ಶಾಲಾ ಆವರಣದಲ್ಲಿ ನೂಪುರ ನೃತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಬೃಂದಾ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 21 ವರ್ಷಗಳಿಂದ ನೂಪುರ ಕಲಾ ಸಂಸ್ಥೆಯು ನೃತ್ಯೋತ್ಸವ ಹಮ್ಮಿಕೊಂಡು ಬರುತ್ತಿದೆ. ಈ ಬಾರಿ `ನವ ಶಕ್ತಿ-ನವ ದುರ್ಗೆ’ ರೂಪಕವನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ನವರಾತ್ರಿಯ 9 ದಿನಗಳ ಕಥೆಯ ಬಗ್ಗೆ ಸುಮಾರು 50 ರಿಂದ 60 ಕಲಾವಿದರು ಎರಡು ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕೆಎಎಸ್ ಅಧಿಕಾರಿ  ಇ. ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ ಡಿ.ಎಸ್. ಜಯಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬೆಂಗಳೂರಿನ ಶ್ರೀ ರುದ್ರಾಕ್ಷ ನಾಟ್ಯಾಲಯದ ಸಂಸ್ಥಾಪಕ ನಿರ್ದೇಶಕಿ ವಿದುಷಿ ಪದ್ಮಿನಿ ಉಪಾಧ್ಯ. ದಾವಣಗೆರೆಯ ದಂತ ತಜ್ಞರಾದ ಡಾ. ರೂಪಶ್ರೀ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸ್ನೇಹ ಶಿವರಾಜ್, ವಿಜಯ ದುರ್ಗಾ ಮೇಕಾ, ಪವಿತ್ರಾ ರಾಯ್ಕರ್, ರಾಧಾ ವಿಶ್ವನಾಥ್ ಉಪಸ್ಥಿತರಿದ್ದರು. 

error: Content is protected !!