ಜಿಗಳಿ : ಎನ್ನೆಸ್ಸೆಸ್ ಶಿಬಿರದಲ್ಲಿ ಪೋಷಕರಿಗೆ ಡಿವೈಎಸ್ಪಿ ಪ್ರಕಾಶ್ ಕಿವಿಮಾತು
ಮಲೇಬೆನ್ನೂರು, ಡಿ.5- ಮಕ್ಕಳಿಗೆ ಶ್ರೀಮಂತಿಕೆಯ ರುಚಿ ತೋರಿಸಬೇಡಿ. 18 ವರ್ಷ ತುಂಬದ ಹೊರತು ಬೈಕು, ಕಾರುಗಳ ಕೀ ಕೊಡಬೇಡಿ. ಬದಲಿಗೆ ಅವರಿಗೆ ಕಷ್ಟ-ಸುಖ ಎರಡರ ಅನುಭವ ಮಾಡಿಸಿ. ಆಗ ಅವರು ನೀವು ಬಯಸಿದ ಮಕ್ಕಳಾಗಿ ಬೆಳೆಯುತ್ತಾರೆ ಎಂದು ಜಿಲ್ಲಾ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್ ಮಕ್ಕಳ ತಂದೆ-ತಾಯಿಗಳಿಗೆ ಕಿವಿಮಾತು ಹೇಳಿದರು.
ಅವರು, ಮಂಗಳವಾರ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ದಲ್ಲಿ ಹರಿಹರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿ ಕೊಂಡಿರುವ ಎನ್ನೆಸ್ಸೆಸ್ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.
ಬದುಕಿನಲ್ಲಿ ಅದ್ಭುತಗಳನ್ನು ಸಾಧಿಸಲು ಡಾ. ಅಂಬೇಡ್ಕರ್ ಅವರಂತೆ ದಿನದ 20 ತಾಸು ಓದುವ ಛಲ ಬೆಳೆಸಿಕೊಳ್ಳಬೇಕು. ಬದುಕಿಗೆ ಒಳ್ಳೆಯ ಅರ್ಥ ಕೊಡುವ ಶಿಕ್ಷಣವನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಪ್ರಕಾಶ್, ಓದಿ ಉನ್ನತ ಸ್ಥಾನಕ್ಕೆ ಹೋದ ನಂತರ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳದವರು ಎಷ್ಟೇ ಓದಿದ್ದರೂ ಅದು ಕಸಕ್ಕೆ ಸಮಾನ ಎಂದರು.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಮಾತನಾಡಿ, ಎನ್ನೆಸ್ಸೆಸ್ ಶಿಬಿರದಲ್ಲಿ ಇಮ್ಮಡಿ ಪುಲಕೇಶಿ ಅವರ ಜಯಂತಿ ಆಚರಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಗ್ರಾ.ಪಂ. ಸದಸ್ಯರಾದ ಹೋಬಳಿ ಆನಂದಗೌಡ, ಡಿ.ಎಂ.ಹರೀಶ್, ಪಿಡಿಓ ಕೆ.ಎಸ್.ಉಮೇಶ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಪಿಎಸ್ಐ ಮಹೇಶ್ ಪಾಟೀಲ್, ಗ್ರಾ.ಪಂ. ಉಪಾಧ್ಯಕ್ಷ ವೈ.ಚೇತನ್ಕುಮಾರ್, ಗ್ರಾ.ಪಂ. ಸದಸ್ಯರಾದ ಕೆ.ಜಿ.ಬಸವರಾಜ್, ಶ್ರೀಮತಿ ಕವಿತಾ ಮಾಕನೂರು ಶಿವು, ಕೆ.ಜಿ.ಮಹಾಂತೇಶ್, ಗ್ರಾ.ಪಂ. ನ ಬಿ.ಮೌನೇಶ್, ವಿ.ಹೆಚ್.ಮೃತ್ಯುಂಜಯ, ಎಸ್ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್, ಮಾಜಿ ಅಧ್ಯಕ್ಷ ಜಿ.ಪಿ.ಹನುಮಗೌಡ, ಶಿಕ್ಷಕ ಬಿ.ರವೀಂದ್ರಚಾರಿ, ಬಾಲ ಕೇಂದ್ರದ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ವಿಜಯಭಾಸ್ಕರ್, ಗ್ರಾಮದ ಮುಖಂಡರಾದ ಕೊಟ್ರಯ್ಯ, ನಾಗಸನಹಳ್ಳಿ ಮಹೇಶ್ವರಪ್ಪ, ಬಿಳಸನೂರು ಚಂದ್ರಪ್ಪ, ಪತ್ರಕರ್ತರಾದ ಪ್ರಕಾಶ್, ಕೃಷ್ಣ, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಡಾ. ಬಿ.ಕೆ.ಮಂಜುನಾಥ್, ಡಾ. ಸಿ.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.