ಸಾಗರ ಮಾಲಿನ್ಯ ಸಮಸ್ಯೆ ಕಡಿಮೆಯಾಗದಿದ್ದಲ್ಲಿ ದೊಡ್ಡ ದುರಂತ

ಸಾಗರ ಮಾಲಿನ್ಯ ಸಮಸ್ಯೆ ಕಡಿಮೆಯಾಗದಿದ್ದಲ್ಲಿ ದೊಡ್ಡ ದುರಂತ

`ವಿಶ್ವ ಮೀನುಗಾರಿಕಾ ದಿನ’ ಕಾರ್ಯಕ್ರಮದಲ್ಲಿ ಡಾ.ಟಿ.ಎನ್. ದೇವರಾಜ್ ಎಚ್ಚರಿಕೆ

ದಾವಣಗೆರೆ, ನ.22- ನಗರದ ಐಸಿಎಆರ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ `ವಿಶ್ವ ಮೀನು ಗಾರಿಕಾ ದಿನ’ ವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ರೈತರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇಂದ್ರದ ಮುಖ್ಯಸ್ಥರು ಹಾಗೂ ಮೀನುಗಾರಿಕಾ ತಜ್ಞ ಡಾ. ದೇವರಾಜ್ ಟಿ.ಎನ್ ಇವರು ಮಾತನಾಡಿ  ಮೀನುಗಾರಿಕಾ ಕ್ಷೇತ್ರದ ಹಿರಿಮೆ, ಉಪಯುಕ್ತತೆ ಹಾಗೂ ಅದರಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. 

ಪ್ರಪಂಚದಲ್ಲಿ 185 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು  ಮೀನುಗಾರಿಕಾ ಉತ್ಪನ್ನವಿದೆ. ಭಾರತದಲ್ಲಿ 16.24 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಉತ್ಪನ್ನವಿದೆ. ಇದರ ಎರಡು ಪಟ್ಟಷ್ಟು ಉತ್ಪಾದನೆಗೆ ಭಾರತದಲ್ಲಿ ಅವಕಾಶವಿದೆ. ಪ್ರಪಂಚದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಚೈನಾ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿರುವ ಜಲಸಂಪನ್ಮೂಲ ಗಳ ಸದ್ಬಳಕೆ ಮಾಡಿಕೊಂಡರೆ ಮೀನುಗಾರಿಕಾ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚು ಮಾಡಬಹುದು ಎಂದರು. 

ಸಾಗರಗಳಿಗೆ ಮಾನವನಿಂದ ಉಂಟಾಗಿರುವ ಮಾಲಿನ್ಯವನ್ನು ತಕ್ಷಣವೇ ಕಡಿಮೆ ಮಾಡದಿದ್ದಲ್ಲಿ ದೊಡ್ಡ ದುರಂತ ಮುಂದೆ ಕಾದಿದೆ. ಭೂಮಿ ಆಧಾರಿತ ಆಹಾರ ಉತ್ಪಾದನೆ ಮುಂದಿನ ದಿನದಲ್ಲಿ ಕ್ಷೀಣಿಸಲಿದ್ದು, ಜಲಾಧಾರಿತ ಆಹಾರ ಉತ್ಪಾದನಾ ಕ್ಷೇತ್ರ ಬಹುಮುಖ್ಯವಾಗಲಿದೆ. ಹೆಚ್ಚುತ್ತಿರುವ ನಮ್ಮ ಜನಸಂಖ್ಯೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದು ಬಹಳ ಮುಖ್ಯ ಹಾಗೂ ಬಲು ದೊಡ್ಡ ಸವಾಲಿನ ಕೆಲಸವಾಗಲಿದೆ.

ಮೀನು ಮತ್ತು ಅದರ ಉತ್ಪನ್ನಗಳು ಅತ್ಯಂತ ಪೌಷ್ಟಿಕಾಂಶಯುಕ್ತವಾಗಿದ್ದು, ನಿಸರ್ಗದತ್ತ ಆಹಾರವಾಗಿ ಮಾನವ ಜನಾಂಗವನ್ನು ಸಲಹಲಿವೆ. ಒಳನಾಡಿನ ರೈತರು ವಿಜ್ಞಾನ-ತಂತ್ರಜ್ಞಾನಗಳನ್ನು ಬಳಸಿಕೊಂಡು ಜಲ ಕೃಷಿಯಲ್ಲಿ ತೊಡಗುವುದು ಸಮಗ್ರ ಕೃಷಿಯ ಪ್ರಮುಖ ಭಾಗವಾಗಲಿದೆ. ಸುರಕ್ಷಿತ ಆಹಾರದ ಉತ್ಪಾದನೆ ಹಾಗೂ ತಿಳುವಳಿಕೆ ಸದ್ಯದ ಸಮಾಜಕ್ಕೆ ಅತ್ಯಗತ್ಯ. 

ಆಹಾರದ ಕಲಬೆರಕೆಗಳು ನಿತ್ಯವೂ ಹೆಚ್ಚಾಗುತ್ತಲಿದ್ದು ವಾಯು ಹಾಗೂ ಭೂಮಿಯ ಕಲುಷಿತ ಪರಿಸ್ಥಿತಿಗಳು ಸರಣಿ ದುರಂತಕ್ಕೆ ಕಾರಣವಾಗಲಿದೆ. ಸುರಕ್ಷಿತ ಜೋಳದ ರೊಟ್ಟಿ, ಅಡುಗೆ ಎಣ್ಣೆ ಮತ್ತು ಅಕ್ಕಿ ನಮಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಆದುದರಿಂದ ಎಲ್ಲ ನಾಗರಿಕರು ಸುರಕ್ಷಿತವಾಗಿ ಆಹಾರವನ್ನು ಬೆಳೆಯುವುದಕ್ಕೆ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಡಾ. ರಘುರಾಜ್ ಕಾರ್ಯಕ್ರಮ ನಿರೂಪಿಸಿದರು. ಡಾ. ಅವಿನಾಶ್ ವಂದಿಸಿದರು.

error: Content is protected !!