ಗ್ಯಾರಂಟಿ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲಿ

ಗ್ಯಾರಂಟಿ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲಿ

ಜಗಳೂರಿನ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಎಸ್ಸೆಸ್ಸೆಂ ಸೂಚನೆ

ಜಗಳೂರು, ನ.21- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅಧಿಕಾ ರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ 2023-24 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ ರೈತರ ಖಾತೆಗಳಿಗೆ ಸಮರ್ಪಕವಾಗಿ ಜಮಾ ಆಗು ವಂತೆ  ಕೃಷಿ, ತೋಟಗಾರಿಕೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗಮನ ಹರಿಸ ಬೇಕು. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿ ಗಳು ಸಾರ್ವಜನಿಕರಿಂದ ದೂರುಗಳು ಬರದಂತೆ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಪ್ಲೋರೈಡ್ ಹೆಚ್ಚು ಇರುವ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಡದಂತೆ ನೋಡಿಕೊಳ್ಳಬೇಕು. ಈಗಾಗಲೇ 57 ಕೆರೆಗಳ ನೀರು ತುಂಬಿಸುವ ಯೋಜನೆ ಬರದಿಂದ ನಡೆಯುತ್ತಿದ್ದು, ಹಲವು ಕೆರೆಗಳಿಗೆ ನೀರು ಬರುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಯೋಜನೆಗಳು ಮುಗಿದು ಕೆರೆಗಳಿಗೆ ನೀರು ಬಂದರೆ ಫ್ಲೋರೈಡ್ ಕೊನೆಗೊಳ್ಳುವುದಲ್ಲದೇ ರೈತರು ತೋಟಗಾರಿಕೆ ಬೆಳೆಯಲು ಅನುಕೂಲವಾಗಲಿದೆ ಎಂದರು.

ದೇವಿಕೆರೆ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಬಾರಿ ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ವಾಗಿ ಮಾಡಿದೆ. ಬರಗಾಲ ಇರುವುದರಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಯಡಿ ಸಿಸಿ ರಸ್ತೆಗಳು, ಕಾಪೌಂಡಗಳು, ಸರ್ಕಾರಿ ಕಟ್ಟಡಗಳನ್ನೂ ಸಹ ನಿರ್ಮಿಸಲು ಯೋಜನೆಗಳಿಗೆ ಅನುಮೋಧನೆ ನೀಡುವಂತೆ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಳಿಗೆ ಸಚಿವರು ಸೂಚನೆ ನೀಡಿದರು. 

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಬರದಿಂದ ರೈತರು, ಕೂಲಿ – ಕಾರ್ಮಿಕರು ಜೀವನ ನಡೆಸಲು ಕಷ್ಟವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಸಂಗ್ರಹಣೆ, ಕೂಲಿಕಾರರಿಗೆ ಕೆಲಸ ನೀಡಬೇಕಿದೆ. ಪಂಚಾಯಿ ತಿಯ ಎಲ್ಲಾ ಪಿಡಿಓಗಳು ಗ್ರಾಮ ಪಂಚಾಯಿತಿ ಗಳಲ್ಲಿದ್ದು, ಜನಸಾಮಾನ್ಯರಿಗೆ ಸ್ಪಂದದಸಿ ಕೆಲಸ ನಿರ್ವಹಿಸುವಂತೆ ಸೂಚನೆನೀಡಿದರು. 

ಎಸ್ಟಿ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ಪಟ್ಟಣ ಪಂಚಾಯಿತಿಗೆ ವರ್ಗಾಯಿಸುವಂತೆ ಸೂಚಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪ ತ್ರೆಯ ಕೆಳಗಿನ ಕಟ್ಟಡ ಬೀಳುವ ಹಂತದಲ್ಲಿದೆ. ಸ್ವಚ್ಛತೆ ಇಲ್ಲ. ಡಯಾಲಿಸಸ್, ಫಿಜಿಷಿಯನ್ ವೈದ್ಯರು ಇಲ್ಲದೇ ರೋಗಿಗಳಿಗೆ ತೊಂದರೆ ಯಾಗಿದೆ ಸಚಿವರ ಗಮನಕ್ಕೆ ತಂದರು. 

ಜಗಳೂರು ಬರಪೀಡಿತ ಪ್ರದೇಶವಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದರಾಗಬಹುದು. ಮುಂಜಾಗೃತವಾಗಿ ಖಾಸಗಿ ಬೋರ್‍ವೆಲ್ ಮಾಲೀಕರಿಂದ  ನೀರು ಪಡೆಯಬೇಕು. ಕೂಲಿಕಾರರಿಗೆ ಕೂಲಿ ಸಿಗು ವಂತೆ ಕೆಲಸ ನಿರ್ವಹಿಸುವ ಹೊಣೆ ಪಿಡಿಓಗಳು ಮಾಡ ಬೇಕು. ತಮ್ಮ ತಮ್ಮ ಇಲಾಖೆಯ ಅಧಿಕಾರಿಗಳು ಏನಾದರೂ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೆ ತರಬೇಕು ಎಂದು ಶಾಸಕರು ತಿಳಿಸಿದರು. 

ಕೃಷಿ, ತೋಟಗಾರಿಕೆ, ಪಶು, ಕುಡಿಯುವ ನೀರು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ವರಧಿಯನ್ನು ಸಭೆಯಲ್ಲಿ ಮಂಡಿಸಿದರು. 

ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಾಹಕಾಧಿಕಾರಿ ಸುರೇಶ್‍ ಬಿ.ಯತ್ನಾಳ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಸಯಿದ್ ಕಲೀಮ್ ಉಲ್ಲಾ, ಇಓ ಕರಿಬಸಪ್ಪ ಉಪಸ್ಥಿತರಿದ್ದರು.

error: Content is protected !!