ಹೂವಿನಹಡಗಲಿ ನ. 21- ಬಹಳ ದಿನಗಳಿಂದ ಪಟ್ಟಣದ ಮುಖ್ಯ ಬೀದಿ ಬದಿಯಲ್ಲಿ ಅನಧಿಕೃತವಾಗಿ ಇಡಲಾಗಿದ್ದ ಶೆಡ್ಗಳನ್ನು ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್ ನೇತೃತ್ವದಲ್ಲಿ ಸಿಬ್ಬಂದಿ ಇಂದು ತೆರವುಗೊಳಿಸಿತು.
ತುಂಗಭದ್ರಾ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಆಗುತ್ತಿದ್ದ ಶೆಡ್ಡು ಸೇರಿದಂತೆ, ಹಳೆ ಪೊಲೀಸ್ ಠಾಣೆ, ಪುರಸಭೆ ಮಳಿಗೆ, ಎಸ್.ಎಮ್ ಛತ್ರದ ಮುಂಭಾಗ, ಬಿಡಿಸಿಸಿ ಬ್ಯಾಂಕಿನ ಆವರಣ ಸೇರಿದಂತೆ ರೀಡಿಂಗ್ ರೂಮ್ ವರೆಗೆ ಅಕ್ರಮ ಜೋಪಡಿ ಶೆಡ್ಡು ಹಾಗೂ ವಾಹನ ಸಂಚಾರಕ್ಕೆ ಅಡ್ಡಲಾಗಿದ್ದ ಗುಡಾರಗಳನ್ನು ಸಹ ತೆರವುಗೊಳಿಸಲಾಯಿತು.
ಪುರಸಭೆಯ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಇದೇ ರೀತಿ ಕ್ರಮ ಕೈಗೊಂಡು ಬೈಪಾಸ್ ರಸ್ತೆಯನ್ನೂ ಸಹ ಮುಕ್ತಗೊಳಿಸಬೇಕು. ಅಲ್ಲದೆ, ಎಪಿಎಂಸಿ ಸರ್ಕಲ್ ಪ್ರದೇಶದಲ್ಲಿ ಅಕ್ರಮ ಮಳಿಗೆಗಳನ್ನು ಇಡಲಾಗಿದೆ.
ಅಲ್ಲದೆ ಖಾಸಗಿ ವ್ಯಕ್ತಿಗಳು ಪುರಸಭೆ ಹೆಸರಲ್ಲಿ ಬಾಡಿಗೆಯನ್ನು ವಸೂಲು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಅಧಿಕಾರಿಗಳಾದ ಕೊಂಚಿಗೇರಿ ಮಾರುತಿ, ಸಂತೋಷ್, ಟಿ.ರಾಮಮೂರ್ತಿ, ಜಿ ಮೈಲಾರಪ್ಪ, ಎಸ್.ಬಸವರಾಜ್, ಸೇರಿದಂತೆ ಪೌರ ಕಾರ್ಮಿಕರು ಮತ್ತು ನೌಕರರು ಭಾಗಿಯಾಗಿದ್ದರು