ವೀರ ಬಾಲಚಂದ್ರ ಘಾಣೇಕರ್ ಸ್ಮರಣೆ

ವೀರ ಬಾಲಚಂದ್ರ ಘಾಣೇಕರ್ ಸ್ಮರಣೆ

ಹರಿಹರ, ನ. 20 – ಕುಮಾರ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಆವರಣದಲ್ಲಿ ಸ್ವಾತಂತ್ರ್ಯ ವೀರ ಬಾಲಚಂದ್ರ ಘಾಣೇಕರ್ ಸ್ಮರಣಾರ್ಥ  ನ. 3 ಅವರ ಹುಟ್ಟಿದ ದಿನದ ಜ್ಞಾಪಕಾರ್ಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ|| ಜಿ.ಜೆ. ಮೆಹೆಂದಳೆಯವರು ನಮ್ಮ ದೇಶಕ್ಕಾಗಿ ಅನೇಕ ಮಹನೀಯರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು, ಜೀವನದ ಸುಖ-ಸಂತೋಷ ಅನುಭವಿಸದೇ ದೇಶಕ್ಕಾಗಿ ತ್ಯಾಗ ಮಾಡಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅಂಥವರಲ್ಲಿ ಧಾರವಾಡದ ಬಾಲಚಂದ್ರ ಘಾಣೇಕರ್ ಒಬ್ಬರು.

ಸ್ವಾತಂತ್ರ್ಯ ಹೋರಾಟದ ಸಮಯ ದಲ್ಲಿ ಒಂದೂರಿಂದ ಒಂದೂರಿಗೆ, ಹೋರಾಟದ ರೂಪು-ರೇಷೆಗಳನ್ನು ತಿಳಿಸಲು ಮುಂದಿನ ಹೋರಾಟದ ಬಗೆಗೆ ಕ್ರಮ ಕೈಗೊಳ್ಳಲು ಈಗಿನಂತೆ ಪೋಸ್ಟ್ – ಟೆಲಿಫೋನ್ ಇರಲಿಲ್ಲ. ಏನಿದ್ದರೂ ಕೈಬರಹದ ಮೂಲಕ ಊರಿಂದೂರಿಗೆ ಪತ್ರ ತಲುಪಿಸುವ ಕೆಲಸವಾಗಬೇಕಿತ್ತು. ಹಾಗಾಗಿ ಬಾಲಚಂದ್ರ ಘಾಣೇಕರ್ ಜವಾಬ್ದಾರಿ  ಕೈಬರಹದ ಓಲೆಗಳನ್ನು, ಸುದ್ದಿಗಳನ್ನು ರಾತ್ರೋರಾತ್ರಿ ಬರೆದು ನಕಲುಗಳನ್ನು ಮಾಡಿ ಪರ ಊರಿನ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ತಲುಪಿಸುವ ಕಾರ್ಯವಾಗಿತ್ತು. ಆ ಸಂಬಂಧ ಬ್ರಿಟಿಷ ಪೋಲಿಸರ ಗಮನಕ್ಕೆ ಇವರ  ಕಾರ್ಯದ ಬಗೆಗೆ ಸುಳಿವು ಸಿಕ್ಕು ಇವರನ್ನು ಅನೇಕ ಬಾರಿ ಬಂಧಿಸಿ ಧಾರವಾಡ, ಬೆಳಗಾಂವ, ಕಾರವಾರ ಮತ್ತು ಗುಜರಾತ್ ಜೈಲಿಗಳಲ್ಲಿ ಸೆರೆಮನೆಗೆ  ತಳ್ಳಿದ್ದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು `ಸಮಾಜ’ ಎಂಬ ಪತ್ರಿಕೆ ಹುಟ್ಟುಹಾಕಿದ್ದರು.

ಹೀಗೆ ಎಲೆ -ಮರೆಯ ಕಾಯಿಯಂತೆ ಅಲ್ಲಲ್ಲೇ ಉಳಿದ ಹೋರಾಟಗಾರರನ್ನು ಮುಂದಿನ ಪೀಳಿಗೆಗೆ ನೆನಪಿನಲ್ಲಿರಿಸು ವದಕ್ಕೋಸ್ಕರ ಹುಡುಕಿ ನೆನಪಿಸುವ ಕಾರ್ಯ ಸಂಶೋಧನಾ ಕೇಂದ್ರ ಮಾಡುತ್ತಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಆವರಣದಲ್ಲಿ ಧನ್ಯೋಸ್ಮಿ ಭರತಭೂಮಿ ತಂಡದಿಂದ ನಮನ ಸಲ್ಲಿಸಲಾಯಿತು. 

ಧನ್ಯೋಸ್ಮಿ ಭರತಭೂಮಿ ತಂಡದ ಸದಸ್ಯರು, ಜಿಲ್ಲಾಧ್ಯಕ್ಷ ಚರಣ್ ಅಂಗಡಿ, ಮಧು, ವಿಜಯ ಉದಗಟ್ಟಿ, ಗುರುಪ್ರಸಾದ್, ಮಹೇಶ ಜಿ. ಕಲ್ಲೇಶ, ಶ್ಯಾಮಾಚಾರಿ, ಕಿರಣ, ಸತೀಶ ವೆರ್ಣೇಕರ್, ಮೀರಾ ವೆರ್ಣೇಕರ್, ಭೂಮಿಕಾ ವಿ, ಡಾ|| ಪ್ರಕಾಶ. ಕೆ. ದಂಪತಿಗಳು ಹಾಗೂ ಶಿವಕುಮಾರ ಎಸ್.ಎಚ್.   ಉಪಸ್ಥಿತರಿದ್ದರು.

error: Content is protected !!