8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ವಿಜ್ಞಾನಿ ಎಂ.ಜಿ ಬಸವನಗೌಡ
ದಾವಣಗೆರೆ, ನ.19- ಆಯುರ್ವೇದವು ಜೀವನ ಮತ್ತು ದೀರ್ಘಾಯುಷ್ಯದ ವಿಜ್ಞಾನವಾಗಿದ್ದು, ವೈದ್ಯಕೀಯ ಪದ್ದತಿಯಲ್ಲಿ ಅದ್ವಿತೀಯ ಮತ್ತು ಅಳಿಸಲಾಗದ ಚಿಕಿತ್ಸಾ ವಿಧಾನವೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ ಬಸವನಗೌಡ ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಸುಶ್ರುತ ಆಯುರ್ವೇದ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕಳೆದ ವಾರ ನಡೆದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ‘ಔಷಧಿ ಸಸ್ಯಗಳ ಪರಂಪರೆ’ ಕುರಿತು ಅವರು ಉಪನ್ಯಾಸ ನೀಡಿದರು.
ಪ್ರಾಚೀನ ಭಾರತದ ಕಾಲದಿಂದಲೂ ಆಯು ರ್ವೇದ ಪದ್ಧತಿ ನಮ್ಮಲ್ಲಿ ಜಾರಿಯಿದ್ದು, ಮಾರಕ ರೋಗಗಳು ಆಯುರ್ವೇದ ಪದ್ಧತಿಯಿಂದ ವಾಸಿಯಾಗಿವೆ. ಇಂದು ವಿಪರೀತ ವಿಷಯುಕ್ತ ಆಹಾರ ಸೇವನೆಯಿಂದ ದೇಹದಲ್ಲಿ ನಿರೋಧಕ ಶಕ್ತಿ ಕುಂದುತ್ತಿದೆ. ಈ ಸಂದರ್ಭದಲ್ಲಿ ಆಹಾರದಲ್ಲಿ ಸ್ಥಳೀಯ ಔಷಧಿ ಗುಣಗಳುಳ್ಳ ಸಸ್ಯಗಳನ್ನು ಬಳಸುವುದರಿಂದ ದೇಹದಲ್ಲಿ ಚೈತನ್ಯ ಹೆಚ್ಚುವುದ ಲ್ಲದೇ ರೋಗದಿಂದ ಮುಕ್ತಿ ಹೊಂದಬಹುದು.
ಭಾರತವು ವೈದ್ಯಕೀಯ ಸಸ್ಯಗಳ ಕಣಜವಾಗಿದ್ದು, ಸುಮಾರು 7,000 ಕ್ಕೂ ಹೆಚ್ಚು ಪ್ರಭೇದಗಳು ನಮ್ಮಲ್ಲಿವೆ. ಇವುಗಳ ಬಳಕೆ ಮತ್ತು ಸಂಶೋಧನೆ ನಮ್ಮಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಾದರೆ ಆಯುರ್ವೇದ ಪದ್ಧತಿ ಮುನ್ನೆಲೆಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್ ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ನಗರದಲ್ಲಿ ಬೀದಿಗೊಂದು ಔಷಧಿ ಅಂಗಡಿ ಮತ್ತು ಆಸ್ಪತ್ರೆಯನ್ನು ತೆರೆಯಲಾಗುತ್ತಿದೆ. ಇದು ಸಮಾಜಕ್ಕೆ ಒಳಿತಲ್ಲ, ಯುವ ಜನತೆ ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದೆಂದು ಕರೆ ನೀಡಿದರು.
ಸುಶ್ರುತ ಆಯುರ್ವೇದ ಕಾಲೇಜಿನ ಉಪನ್ಯಾಸಕಿ ಡಾ. ಹೇಮಶ್ರೀ, ವಿವಿಧ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಬಿ.ಓ. ಮಲ್ಲಿಕಾರ್ಜುನ, ಜೆ. ರಘುರಾಜ, ಡಾ. ಜಿ.ಕೆ ಜಯದೇವಪ್ಪ, ಹೆಚ್. ಎಂ. ಸಣ್ಣಗೌಡ್ರ, ಡಾ. ಟಿ.ಜಿ. ಅವಿನಾಶ್ ಹಾಗೂ ಇತರರು ಭಾಗವಹಿಸಿದ್ದರು.