ದಾವಣಗೆರೆ, ನ.19- ಶೋಷಿತರು, ದಮನಿತರು ವಾಸಿಸುವ ಕೊಳೆಗೇರಿಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾದಂತೆ ಎಂದು ವಕೀಲರ ಸಂಘದ ಅಧ್ಯಕ್ಷರೂ ಆದ ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ್ ಪ್ರತಿಪಾದಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಸ್ಲಂ ಜನಾಂದೋಲನ-ಕರ್ನಾಟಕ, ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಕೊಳಗೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಅಭಿವೃದ್ಧಿ ಪಡಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಿದಂತೆ ಎಂದರು. ಸ್ಲಂಗಳಲ್ಲಿ ವಾಸಿಸುವ ಜನರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಕೊಳಗೇರಿಗಳಿಗೆ ಮತ್ತಷ್ಟ ಮೂಲಸೌಕರ್ಯ ಕಲ್ಪಿಸಬೇಕಿದೆ. ಶಾಲೆ, ವಸತಿ, ನೀರು, ಶಿಕ್ಷಣವನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸ್ಲಂ ಜನಾಂದೋಲನ ಹಾಗೂ ಸಾವಿತ್ರಿ ಬಾಪುಲೆ ಸಂಘಟನೆಗಳು ಕೆಲಸ ಮಾಡುತ್ತಿರುವುದು ಶ್ಲ್ಯಾಘನೀಯ ಕಾರ್ಯ ಎಂದು ಹೇಳಿದರು.
ದೇಶದ ಪ್ರತಿಯೊಬ್ಬರಿಗೂ ಸಂವಿಧಾನಬದ್ಧ ಹಕ್ಕುಗಳಿದ್ದು, ನಮಗೆ ನೀಡಿದ ಹಕ್ಕು, ಕಾನೂನುಗಳ ಬಗ್ಗೆ ನಮಗೆ ಅರಿವು ಇರಬೇಕು. ಮಹಿಳೆಯರ ಪರವಾಗಿ ಸಾಕಷ್ಟು ಕಾನೂನು ಇದೆ. ಯಾರಿಗೆ ಯಾವುದೇ ಸಮಸ್ಯೆ, ತೊಂದರೆಯಾದರೂ ಕಾನೂನು ನೆರವಿನ ಅಗತ್ಯವಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಉಚಿತವಾಗಿ ಕಾನೂನು ನೆರವು ಪಡೆಯಬಹುದು ಎಂದು ತಿಳಿಸಿದರು.
ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯ
ಸರ್ಕಾರದ ಯಾವುದೇ ಇಲಾಖೆಯಿಂದ ನಿಮ್ಮ ಕೆಲಸ ಆಗದಿದ್ದರೆ, ವಿಳಂಬವಾಗುತ್ತಿದ್ದರೆ ಅಂತಹ ಇಲಾಖೆಗೆ ಸಂಪರ್ಕಿಸಿ. ನಿಮಗೆ ನ್ಯಾಯ ಕೊಡಿಸುವ ಕೆಲಸ ಹಾಗೂ ನಿಮ್ಮ ವೈಯಕ್ತಿಕ ಸಮಸ್ಯೆಗಳಾದ ಆಸ್ತಿಪಾಲು, ಜೀವನಾಂಶ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯ ಕೊಡಿಸುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರಗಳು ಮಾಡುತ್ತವೆ.
– ಎಲ್.ಎಚ್. ಅರುಣಕುಮಾರ್, ಜಿಲ್ಲಾ ವಕಿಲರ ಸಂಘದ ಅಧ್ಯಕ್ಷ
ಪುರುಷ ಪ್ರಧಾನ ಸಮಾಜವೆಂಬ ಧೋರಣೆ ಹಿಂದಿನಿಂದಲೂ ಬೇರು ಬಿಟ್ಟಿದೆ. ಮೊದಲು ಮನುಷ್ಯರಲ್ಲಿ ಇರುವ ಅಂತಹ ಮನಃಸ್ಥಿತಿ ಬದಲಾವಣೆಯಾಗಬೇಕು. ಗಂಡು, ಹೆಣ್ಣು ಸಮಾನವೆಂಬುದು ಎಲ್ಲರೂ ಅರಿಯಬೇಕು. ಮಹಿಳೆಯರು ಮತ್ತು ಮಕ್ಕಳು ಸಮಾಜದಲ್ಲಿ ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು. ಆಗ ಮಾತ್ರ ನೀವು ಜಾಗೃತರಾಗಿ ಶೋಷಣೆ ತಡೆಯುವಲ್ಲಿ ಸಫಲರಾಗುತ್ತೀರಿ ಎಂದು ಕಿವಿಮಾತು ಹೇಳಿದರು.
ನಿವೃತ್ತ ಅಭಿಯಂತರ ಎಸ್.ಎಲ್. ಆನಂದಪ್ಪ ಮಾತನಾಡಿ, ಎಲ್ಲಿಯವರೆಗೆ ಕಾನೂನು ಅರಿವು ನಮಗೆ ಇರುವುದಿಲ್ಲವೋ ಅಲ್ಲಿಯವರೆಗೂ ನಿಮ್ಮ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಕನಿಷ್ಠ ಅರಿವು ಹೊಂದಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಬೇಕು. ದಾವಣಗೆರೆಯ ಸ್ಲಂಗಳಲ್ಲಿ 13685 ಕುಟುಂಬಗಳು ನಿವೇಶನ ರಹಿತರಿದ್ದು, ಮುಂದಿನ ದಿನಗಳಲ್ಲಿ ಸ್ವಂತ ನಿವೇಶನಕ್ಕಾಗಿ ಡಿಸಿ ಕಚೇರಿ ಎದುರು ಧರಣಿ ನಡೆಸಲು ಸಿದ್ಧರಾಗಿ ಎಂದು ಕರೆ ನೀಡಿದರು.
ಸ್ಲಂ ಜನಾಂದೋಲನದ ಅಧ್ಯಕ್ಷ ಎಂ. ಶಬ್ಬೀರ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ಟಿ.ಎಂ. ಅನ್ನಪೂರ್ಣ, ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷರಾದ ಮಂಜುಳಾ, ಮಂಡಕ್ಕಿ ಭಟ್ಟಿಗಳ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ಹರ್ಷದ್ ಇತರರಿದ್ದರು.