ದಾವಣಗೆರೆ, ನ. 19 – ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ರಾಗಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯ ತರಬೇತಿಯನ್ನು ಬಿದರಿಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ. ಓ. ಮಾತನಾಡಿ, ರಾಗಿಯನ್ನು ನೀರಾವರಿ ಮೂಲಕ ಬೆಳೆಯುವುದಾದರೆ ಅಲ್ಪಾವಧಿ ತಳಿಗಳನ್ನು ಬಳಸುವುದು ಸೂಕ್ತ. ವಿಸಿ ಫಾರ್ಮ್ ಮಂಡ್ಯ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರು ಬಿಡುಗಡೆ ಮಾಡಿರುವ ಅಲ್ಪಾವಧಿ ತಳಿಯಾದ ಕೆಎಂಆರ್ 630 ಬಗ್ಗೆ ಮಾಹಿತಿ ಒದಗಿಸಿದರು.
ಜೈವಿಕ ಗೊಬ್ಬರಗಳಾದ ಅಚೋಸ್ಪಿರಿಲಾಂ ಹಾಗೂ ರಂಜಕ ಕರಗಿಸುವ ಗೊಬ್ಬರವನ್ನು ಪ್ರತಿ ಎಕರೆ ಬೀಜಕ್ಕೆ 200 ಗ್ರಾಂ ನಂತೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರದ ಬಳಕೆಯನ್ನು ಹತ್ತರಷ್ಟು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಡಾ. ಟಿ. ಜಿ. ಅವಿನಾಶ್ ಸಸ್ಯ ಸಂರಕ್ಷಣಾ ತಜ್ಞರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಗಿ ಬೆಳೆಯಲ್ಲಿ ಲದ್ದಿ ಉಳುವಿನ ಬಾಧೆ ಕಂಡು ಬಂದಲ್ಲಿ ಎಮಾಮೆಕ್ಟಿನ್ ಬೆಂಝೋಟೆ 0.4 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಾತ್ಯಕ್ಷಿಕೆ ರೈತರಿಗೆ ಹೊಸ ತಳಿಯ ಬಿತ್ತನೆ ಬೀಜ ಹಾಗೂ ಜೈವಿಕ ಗೊಬ್ಬರಗಳನ್ನು ಒದಗಿಸಲಾಯಿತು.