ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಕರೆ
ಹರಪನಹಳ್ಳಿ, ನ. 17 – ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿ ಮಾಡಿ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಹೇಳಿದರು.
ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಅಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹರಪನಹಳ್ಳಿ ತಾಲ್ಲೂಕಿನಲ್ಲಿ ಬಹುಸಂಖ್ಯಾತ ರಾಗಿರುವ ವಾಲ್ಮೀಕಿ ನಾಯಕ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಿದೆ.
ರಾಜನಹಳ್ಳಿಯ ವಾಲ್ಮೀಕಿ ಶ್ರೀಗಳು ಬೇಡ ವಾಲ್ಮೀಕಿ ನಾಯಕ ಸಮುದಾಯವನ್ನು ಒಂದೇ ವೇದಿಕೆಗೆ ಕರೆತಂದು ಜಾತ್ರೆಯ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದಲ್ಲಿ ತಿಳಿಸಿರುವ ಮಾನವೀಯ ಮೌಲ್ಯಗಳನ್ನು ಇಡೀ ಮನುಕುಲಕ್ಕೆ ಸಾರಿದ ರಾಮಾ ಯಣ ದಂತಹ ಮಹಾಕಾವ್ಯ ಬರೆದು ಇಡೀ ಜಗತ್ತಿಗೇ ಉತ್ತಮ ಸಂದೇಶ ಸಾರಿದ್ದಾರೆ. ನಾವು ಸಂಘಟಿತರಾಗಬೇಕು ಎಂದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಬರಿ ಕುಣಿದು ಕುಪ್ಪಳಿಸುವುದಕ್ಕೆ ಸೀಮಿತವಾಗಿರಬಾರದು. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯಕ್ರಮ ಗಳನ್ನು ಅಯೋಜಿಸಿ ಉತ್ತಮ ಉಪನ್ಯಾಸ ನೀಡುವ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮವಾಗಬೇಕು. ಅ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ವಾಲ್ಮೀಕಿ ಜಯಂತಿ ಆಚರಿಸುವ ಮೂಲಕ ಎಲ್ಲಾ ಜಾತಿ ಸಮಾಜದ ಮುಖಂಡರುಗಳನ್ನು ಆಹ್ವಾನಿಸುವ ಮೂಲಕ ಜಾತಿ ರಹಿತ ವಾದ ಕಾರ್ಯಕ್ರಮ ಗಳನ್ನು ಮಾಡಬೇಕು ಎಂದರು.
ಪಂಚಮಸಾಲಿ ಸಮಾಜದ ಮುಖಂಡರಾದ ಪ್ರಶಾಂತ ಪಟೇಲ್ ಮಾತನಾಡಿ, ವಿದ್ಯೆ ಯಾರೂ ಕದಿಯಲಾರದ ಸ್ವತ್ತು. ಶಿಕ್ಷಣದ ಜೊತೆ ವಿನಯತೆ ಕಲಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ಜಟ್ಟುನಕಟ್ಟಿಯ ಎಚ್.ಕೆ.ಮಂಜುನಾಥ ಮಾತನಾಡಿ, ರಾಜ್ಯದ 4ನೇ ಅತಿದೊಡ್ಡ ಸಮಾಜವಾಗಿರುವ ವಾಲ್ಮೀಕಿ ನಾಯಕ ಸಮಾಜ ಎಲ್ಲಾ ರಂಗಗಳಲ್ಲಿ ಮುಖ್ಯವಾಹಿನಿಗೆ ಬರಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು ಎಂದರು.
ವಕೀಲರಾದ ಅರಸಿಕೇರಿಯ ಎಂ. ಸುರೇಶ ಮಾತನಾಡಿ, ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಬಹು ಮುಖ್ಯ ಅಸ್ತ್ರವಾಗಿದೆ ಎಂದರು.
ಮತ್ತಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಣ್ಣಹೊನ್ನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಮತ್ತಿಹಳ್ಳಿ ಶಿವಣ್ಣ ಯುವ ಮುಖಂಡ ಬಾಲೇನಹಳ್ಳಿಯ ಕೆಂಚನಗೌಡ, ಮುಖಂಡರಾದ ಬೆಟ್ಟನಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಕರಿಬಸಪ್ಪ, ಮುಖಂಡರಾದ ಆರ್.ಕೊಟ್ರಗೌಡ್ರು, ಸಂದೇರ್ ಸಣ್ಣ ನಿಂಗಪ್ಪ, ವೆಂಕಟೇಶ, ಪಚ್ಚೇರ್ ಮಂಜಪ್ಪ, ರಾಮಾಂಜಿನಪ್ಪ, ಟಿ. ಗೌಡಪ್ಪ, ಶಾಂತಕುಮಾರ, ಲಂಕೇಶ, ಪಿ. ದೊಡ್ಡಬಸಪ್ಪ.ಟಿ.ಕೃಷ್ಣಮೂರ್ತಿ. ಡಿ.ಗೋಣಿಬಸಪ್ಪ. ತಿಮ್ಮಕ್ಕ, ಪಾವರ್ತಮ್ಮ ಸೇರಿದಂತೆ ಇತರರು ಇದ್ದರು.