ಮಾಯಕೊಂಡದಲ್ಲಿ ಮನ ಸೆಳೆದ ಪೂಲ್ ತೊಡೇರಾ, ಮೇರಾ ಕಾಡ
ಮಾಯಕೊಂಡ, ನ.17- ವಿಶಿಷ್ಟ ಸಂ ಸ್ಕೃತಿ, ಸಂಪ್ರದಾಯ ಮೈಗೂಡಿಸಿಕೊಂಡಿರುವ ಲಂಬಾಣಿ ಸಮುದಾಯದವರು ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ತಾಲ್ಲೂಕಿನ ತೊಳಹುಣಸೆ, ಆಲೂರು ಹಟ್ಟಿ, ಪರಶುರಾಂಪುರ, ದೊಡ್ಡ ಮಾಗಡಿ, ಹೆದ್ನೆ, ಈಚಘಟ್ಟ, ಹುಲಿಕಟ್ಟೆ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿತ್ತು.
ಲಂಬಾಣಿ ಸಂಪ್ರದಾಯದ ಹಾಡಿಗೆ ನರ್ತಿಸುತ್ತಾ, ಹೂ ತರಲು ಹೊರಟ ಯುವತಿಯರ ವೈಯ್ಯಾರ, ನಗಾರಿ ಸದ್ದಿಗೆ, ಕೋಲಾಟದ ತಾಳಕ್ಕೆ ಕುಣಿಯುವ ಯುವಕರ ಸಂಭ್ರಮ, ಮನೆ ಮನೆ ಮುಂದೆ ದೀಪ ಬೆಳಗಿಸಿ, ಹೂವಿನ ಚಿತ್ತಾರ ಹರಡಿ, ಶುಭ ಹಾರೈಸುವ ಯುವತಿಯರು, ಹೀಗೆ ಮನ ಸೆಳೆಯುವ ದೃಶ್ಯಗಳಿಂದ ಲಂಬಾಣಿ ತಾಂಡಾಗಳು ಮನ ಸೂರೆಗೊಂಡವು.
ಸೋಮವಾರ ಸಂಜೆ ಯುವತಿಯರು ಗುಂಪಾಗಿ ಮನೆ ಮನೆಗಳಿಗೆ ತೆರಳಿ ಮನೆ ಅಂ ಗಳದ ಮುಂದೆ ದೀಪವಿಟ್ಟು, ಆರತಿ ಬೆಳಗಿ, ಮನೆಮಂದಿಗೆ ಶುಭ ಹಾರೈಸಿ `ಮೇರಾ ಕಾಡೇರಾ’ ಆಚರಿಸಿದರು. `ಕತ್ತಲಿನಂಥ ಕಷ್ಟ ಕರಗಿ, ದೀಪದ ಬೆಳಕಿನಂತೆ ನೆಮ್ಮದಿ, ಸಮೃದ್ಧಿ ದೊರಕಲಿ’ ಎಂದು ಹರಸಿದ ತರುಣಿಯರಿಗೆ ಬಂಧುಗಳು ಉಡುಗೊರೆ ನೀಡಿ ಸಂತಸಪಟ್ಟರು.
ದೀಪಾವಳಿ ದಿನ ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಹಿರಿಯರ ಪೂಜೆ ಮಾಡಿ, ಎಡೆ ಅರ್ಪಿಸಿದರು. ಪೂಜೆ ಮುಗಿಯುತ್ತಲೇ ಯುವತಿಯರು `ಫೂಲ್ ತೊಡೇರಾ’ ಕ್ಕೆ ಸಿದ್ದರಾದರು. ಲಂಬಾಣಿ ಸಂಪ್ರದಾಯದ ಉಡುಗೆ ಧರಿಸಿ, ಲಂಬಾಣಿ ಪದಗಳಿಗೆ ಹೆಜ್ಜೆ ಹಾಕುತ್ತಾ, ಹೂ ತರಲು ಹೊರಟರು. ಬಲೂನು, ಹಾರದಿಂದ ಅಲಂಕೃತ ಛತ್ರಿ ಹಿಡಿದ ಮಹಿಳೆಯ ಸುತ್ತ ಗುಂಪಾಗಿ ಯುವತಿಯರು ನರ್ತಿಸಿ, ಕಳೆ ತಂದರು. ಡಿಜೆ ಸದ್ದಿಗೆ ಯುವಕ, ಯುವತಿಯರು, ಮಹಿಳೆಯರು ಹೆಜ್ಜೆ ಹಾಕಿದರು. ಯುವಕರು ಬಗೆಬಗೆಯ ಉಡುಗೆ, ರುಮಾಲು ಧರಿಸಿ, ಕೋಲಾಟವಾಡುತ್ತ, ನಗಾರಿ ಸದ್ದಿಗೆ ಹೆಜ್ಜೆ ಹಾಕಿ ಕುಣಿಯುತ್ತಾ ಸಾಗಿದ್ದರು.
ಹೊಲದ ಹಾದಿಯಲ್ಲಿನ ತಂಕಟಿ ಹೂ, ಕಣಗಿಲ, ತೊಗರಿ ಹೂ ತಂದು ಸೆಗಣಿ ಮುದ್ದೆಗೆ ಮುಡಿಸಿ `ಗೋದ್ನೋ’ ಮಾಡಲಾಯಿತು. ಮನೆಗಳ ಮುಂದೆ ಗೋದ್ನೋ ಇಟ್ಟು, ಹೂ ಹರಡಿ ಯುವತಿಯರು ಪರಸ್ಪರ ಶುಭ ಕೋರಿದರು.
ಶ್ರಮ ಸಂಸ್ಕೃತಿಯ ವಿಶೇಷ : ಹೂ ತರುವ `ಪೂಲ್ ತೊಡೇರ್’ ದೀಪ ಬೆಳಗಿಸುವ `ಮೇರಾ ಕಾಡೇರಾ’ ಇವೆರಡೂ ನಮ್ಮ ಶ್ರಮ ಸಂಸ್ಕೃತಿಯ ವಿಶೇಷ. ಹಳೇ ತಲೆಮಾರಿನಿಂದ ಇಂದಿನ ಆಧುನಿಕ ಕಾಲದವರೆಗೂ ನಮ್ಮವರು ಉಳಿಸಿಕೊಂಡಿರುವ ಆಚರಣೆ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಾರೆ. ನಮ್ಮೂರಿನಲ್ಲಿ ಲಂಬಾಣಿ ಜನಾಂಗದವರೇ ಅತಿ ಹೆಚ್ಚು. ಈ ಹಬ್ಬಕ್ಕೆ ಊರಿನಿಂದ ದೂರದಲ್ಲಿರುವ ಎಲ್ಲಾ ಬಂಧು ಗಳೂ ರಜೆ ಪಡೆದು ಆಗಮಿಸುತ್ತಾರೆ ಎಂದು ಆಲೂರು ಹಟ್ಟಿ ಮುಖಂಡರಾದ ಹನುಮಂತ ನಾಯ್ಕ, ರಂಗನಾಯ್ಕ ಸಂತಸ ಹಂಚಿಕೊಂಡರು.
ಸಂಪ್ರದಾಯ ಉಳಿಸುವ ಹಬ್ಬ :
`ದೀಪಾವಳಿ ನೆಲ, ಸಂಸ್ಕೃತಿ ಬಿಂಬಿಸುವ ಹಬ್ಬವಾದರೆ, ನಮ್ಮವರು ‘ಹಿರಿಯರ ಹಬ್ಬ’ ವಾಗಿ ಆಚರಿಸುತ್ತಾರೆ. ಉಡುಗೆ, ತೊಡುಗೆ, ಸಂಪ್ರದಾಯದ ಹಾಡು ಎಲ್ಲವನ್ನೂ ಉಳಿಸಿ, ಬೆಳೆಸಲು ದೀಪಾವಳಿ ಆಚರಿಸುತ್ತೇವೆ ಎನ್ನುತ್ತಾರೆ ಆನಗೋಡಿನ ಅನಿಲ್ ನಾಯ್ಕ, ಪರಶುರಾಂಪುರದ ಜಯಾ ನಾಯ್ಕ, ಓಂಕಾರ ನಾಯ್ಕ ಮತ್ತು ಬುಳ್ಳಾಪುರ ಚಂದ್ರಾನಾಯ್ಕ .
ಸೈನಿಕರೂ ಬರುವ ದೀಪಾವಳಿ : `ತೋಳ ಹುಣಸೆಯಲ್ಲಿ ನೂರಾರು ಲಂಬಾಣಿ ಯುವಕರು ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಎಲ್ಲಾ ಯೋಧರು ದೀಪಾವಳಿಗೆ ಬಂದು ನಮ್ಮೂರ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ಗ್ರಾಮದ ಟಿ. ಕುಮಾರ ನಾಯ್ಕ.
– ಜಿ.ಜಗದೀಶ್ , ಮಾಯಕೊಂಡ