ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಮತ
ಸಂತೇಬೆನ್ನೂರು, ನ. 12 – ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯವಾಕ್ಯಗಳ ಮಹತ್ವವನ್ನು ತಿಳಿಸುವುದರ ಮೂಲಕ ಶೋಷಿತರ ಏಳಿಗೆಗಾಗಿ ಧ್ವನಿಯಾಗಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಎಂದು ಚನ್ನ ಗಿರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ `ಡಾ. ಬಿ.ಆರ್.ಅಂಬೇಡ್ಕರ್ ಓದು-ಬರಹ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಂಬೇಡ್ಕರ್ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಬೇಕು. ಅವರು ಜ್ಞಾನಾರ್ಜನೆಗೆ ತೋರಿದ ಆಸಕ್ತಿ, ಸಂಪನ್ಮೂಲಗಳನ್ನು ಬಳಸಿಕೊಂಡ ಬಗೆ, ಸಮಾಜದ ಬೆಳವಣಿಗೆಗೆ ಶಿಕ್ಷಣವನ್ನು ಬಳಸಿಕೊಂಡ ರೀತಿ, ದೇಶಕ್ಕೆ ತೋರಿದ ಗೌರವ ಹಾಗೂ ಇಡೀ ಭಾರತವನ್ನು ಸಮಗ್ರವಾಗಿ ನೋಡಿದ ಪರಿ ಎಲ್ಲವೂ ಅನುಕರಣೀಯ ಮತ್ತು ಆದರ್ಶನೀಯ ಎಂದರು.
ಉಪನ್ಯಾಸಕ ಚಂದ್ರಪ್ಪ ಮಾತನಾಡಿ ಗುಲಾಮಗಿರಿಯನ್ನು ತೊಡೆದು ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ಡಾ.ಅಂಬೇಡ್ಕರ್ ನಂಬಿದ್ದರು. ಇದು ಶೋಷಿತರಲ್ಲಿ ಜಾಗೃತಿಯನ್ನು ಮೂಡಿಸಿ, ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ಅವರು ರಾಜಕೀಯ ಸ್ವಾತಂತ್ರ್ಯ ಪಡೆಯಬೇ ಕೆಂಬುದು ಅವರ ಅಭಿಲಾಷೆಯಾಗಿತ್ತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರವಿಚಂದ್ರ ಮಾತನಾಡಿ ನಮ್ಮ ದೇಶದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮಹಿಳಾ ಶಿಕ್ಷಣವನ್ನು ಕಡ್ಡಾಯಗೊಳಿಸಿ, ವಿಶ್ವದಲ್ಲೇ ಮೊದಲು ಮಹಿಳೆಯರಿಗೆ ಮತದಾನದ ಹಕ್ಕು ಕಲ್ಪಿಸಿ ರಾಷ್ಟ್ರೀಯ ಪ್ರಾತಿನಿಧ್ಯ ನೀಡುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿನಿ ಮಾನಸ ಅವರಿಗೆ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಹೆಚ್.ಗಿರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ.ರಾಜಶೇಖರ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ವಿ.ಜಿ.ಪ್ರಸಾದ್, ಕನ್ನಡ ವಿಭಾಗದ ಮುಖ್ಯಸ್ಥರಾದ ಜಿ.ಸಿ.ಗಾಯತ್ರಮ್ಮ, ಉಪನ್ಯಾಸಕ ಎನ್.ಮಲ್ಲಯ್ಯ, ಮಮತಾ, ಮೋಹನ್, ನಾಗರತ್ನ, ಸುರೇಶ್, ಪುನೀತ್, ಪ್ರಸನ್ನ, ಯತೀಶ್ ಮತ್ತಿತರರು ಇದ್ದರು.