ಹೆದ್ದಾರಿ ತಡೆದು ಪ್ರತಿಭಟನೆ, ತಕ್ಷಣ ನೀರು ಹರಿಸದೇ ಇದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ದಾವಣಗೆರೆ, ಸೆ. 21 – ಭದ್ರಾ ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ 100 ದಿನ ನೀರು ಹರಿಸುವ ಈ ಹಿಂದಿನ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನೀರಿಗಾಗಿ ಹೋರಾಡುತ್ತಿರುವ ರೈತರು ಹೆದ್ದಾರಿ ತಡೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ತಮ್ಮ ಕಚೇರಿಯಲ್ಲಿ ರೈತರ ಸಭೆ ಕರೆದಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಕಾವೇರಿ ವಿಷಯ ವಾಗಿ ದೆಹಲಿಗೆ ತೆರಳಿದ್ದಾರೆ. ಅವರು ಮರಳಿದ ನಂತರ ನಿರಂತರ ವಾಗಿ ನೀರು ಹರಿಸುವ ರೈತರ ಬೇಡಿಕೆ ಕುರಿತು ಉಪಮುಖ್ಯ ಮಂತ್ರಿ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ರೈತರು ಹೋರಾಟ ನಿಲ್ಲಿಸಬೇಕು ಎಂದು ಕೇಳಿದರು.
ರೈತರ ದಾರಿ ತಪ್ಪಿಸುವ ಅಧಿಕಾರಿಗಳು
ಕಳೆದ ಸೆ.6ರಂದು ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ.) ಸಭೆ ಅಪೂರ್ಣವಾಗಿತ್ತು. ಇಷ್ಟಾದರೂ ಸಮಿತಿಯ ಹೆಸರಿನಲ್ಲಿ ನೀರು ನಿಲ್ಲಿಸಲು ಆದೇಶ ಹೊರಡಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು, ಐ.ಸಿ.ಸಿ. ಅಧ್ಯಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ಅಧಿಕಾರ ನೀಡಿರಬಹುದು. ಅವರ ನಿರ್ಧಾರದಂತೆ ನೀರು ನಿಲ್ಲಿಸಲಾಗಿದೆ ಎಂದರು.
ಈ ಬಗ್ಗೆ ಆಕ್ಷೇಪಿಸಿದ ರೈತ ಮುಖಂಡರು, ಮಧು ಬಂಗಾರಪ್ಪ ದಾವಣಗೆರೆ ಭಾಗದ ರೈತರ ಹಿತ ಪರಿಗಣಿಸದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ನೀರಿದ್ದರೂ ಕೊಡದೇ ಕಾಡುತ್ತಿದ್ದಾರೆ
ಭದ್ರಾ ಅಣೆಕಟ್ಟೆಯಲ್ಲಿ ಈಗ 43.38 ಟಿಎಂಸಿ ನೀರಿದೆ. ಇದರಲ್ಲಿ 1.83 ಡೆಡ್ ಸ್ಟೋರೇಜ್. ಕುಡಿಯುವ ನೀರು ಹಾಗೂ ಕೈಗಾರಿಕಾ ಉದ್ದೇಶಕ್ಕೆ 6.9 ಟಿಎಂಸಿ ನೀರು ಲಭ್ಯವಿದೆ. 2.16 ಟಿಎಂಸಿ ನೀರು ಆವಿಯಾಗುವ ಅಂದಾಜಿದೆ. ಇದನ್ನು ಹೊರತು ಪಡಿಸಿ 22.8 ಟಿಎಂಸಿ ನೀರು ಕೃಷಿಗೆ ಲಭ್ಯವಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ಬಗ್ಗೆ ಮಾತನಾಡಿದ ರೈತ ಮುಖಂಡರು, ಕೃಷಿಗೆ 22.8 ಟಿಎಂಸಿ ನೀರಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ, ಭದ್ರಾ ಬಲದಂಡೆಗೆ ನಿರಂತರ ನೀರು ಹರಿಸಲು 15 ಟಿಎಂಸಿ ಸಾಕು. ಇಷ್ಟಾದರೂ ನೀರು ಬಿಡದೇ ರೈತರನ್ನು ಕಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ರೈತರ ವಾದಕ್ಕೆ ಸಮ್ಮತಿಸಿದ ಜಿಲ್ಲಾಧಿ ಕಾರಿ ಎಂ.ವಿ. ವೆಂಕಟೇಶ್, ಭತ್ತದ ಬೆಳೆಯಿಂದ ಧಾನ್ಯದ ಜೊತೆಗೆ ಜಾನುವಾ ರುಗಳಿಗೆ ಮೇವು ಸಿಗಲಿದೆ. ಭತ್ತದ ಬೆಳೆ ಕೈ ಕೊಟ್ಟರೆ ಮುಂದಿನ ಮಳೆಗಾಲ ದವರೆಗೆ ಜಾನುವಾರುಗಳಿಗೆ ಮೇವು ಪೂರೈಕೆ ಸಮಸ್ಯೆಯಾಗಲಿದೆ ಎಂದರು.
ಸರ್ಕಾರ ಇರೋದು ಮಂಡ್ಯಕ್ಕಷ್ಟೇ ಅಲ್ಲ
ಭದ್ರಾ ಸಲಹಾ ಸಮಿತಿ ಸಭೆ ಕರೆಯುವ ಬಗ್ಗೆ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರ ಜೊತೆ ಸ್ಥಳದಲ್ಲಿಯೇ ದೂರವಾಣಿಯಲ್ಲಿ ಮಾತನಾಡಿದರು.
ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾವೇರಿ ವಿಷಯಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಅವರು ವಾಪಸ್ ಬರುವವರೆಗೆ ಈ ಬಗ್ಗೆ ನಿರ್ಧಾರ ಸಾಧ್ಯವಾಗದು ಎಂದು ಗುಂಗೆ ಅವರು ಜಿಲ್ಲಾಧಿಕಾರಿಗೆ ತಿಳಿಸಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡ ಶಾಮನೂರು ಹೆಚ್.ಆರ್. ಲಿಂಗರಾಜ್, ಸರ್ಕಾರ ಇರುವುದು ಕೇವಲ ಮಂಡ್ಯಕ್ಕಷ್ಟೇ ಅಲ್ಲ. ಮಧ್ಯ ಕರ್ನಾಟಕದ ಬಗ್ಗೆಯೂ ಗಮನ ಹರಿಸಬೇಕು ಎಂದರು.
ಈಗಾಗಲೇ ನಾಲೆಗಳಿಗೆ ನೀರು ನಿಲ್ಲಿಸಲಾಗಿದೆ. ನಿರ್ಧಾರ ಇನ್ನೂ ವಿಳಂಬವಾದರೆ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತ ನಾಶವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ನೀರು ಹರಿಸುವ ಕುರಿತು ನಾಳೆ ಶುಕ್ರವಾರ ಮಧ್ಯಾ ಹ್ನದ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಶಾಂತಿಯುತ ಹೋರಾಟ ನಡೆಸುತ್ತೇವೆ. ನಂತರವೂ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಕೈ ಮೀರಬಹುದು. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದೂ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಶೀಲ್ದಾರ್ ಅಶ್ವತ್ಥ್, ಜಲ ಸಂಪನ್ಮೂಲ ಇಲಾಖೆಯ ಬಿ.ಆರ್.ಪಿ. ವಲಯದ ಸೂಪರಿಂಟೆಂಡಿಂಗ್ ಇಂಜಿನಿಯರ್ ಎನ್. ಸುಜಾತ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ರೈತ ಮುಖಂಡರಾದ ಶಾಮನೂರು ಲಿಂಗರಾಜು, ಕೊಳೇನಹಳ್ಳಿ ಬಿ.ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ದ್ಯಾವಪ್ಪ ರೆಡ್ಡಿ ಇತರರಿದ್ದರು.