ಉದಯೋನ್ಮುಖ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭ
ದಾವಣಗೆರೆ, ಸೆ.21- ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ, ಫೋಟೋ ಗ್ರಾಫರ್ಸ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ದೇವನಗರಿ ಎಕ್ಸ್ಪೋ-23 ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 23ರಂದು ಆಯೋಜಿಸಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಫೋಟೋಗ್ರಾಫರ್ಸ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ, ಹರಿಹರ ರಸ್ತೆಯ ಕಮ್ಮವಾರಿ ಸಮುದಾಯ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ 9 ರಿಂದ 12ರವರೆಗೆ ನುರಿತ ತಜ್ಞರಿಂದ ಕಾರ್ಯಾಗಾರ ನಡೆಯಲಿದೆ. ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಫೋಟೋ ಕ್ಯಾಮೆರಾ ಹಾಗೂ ವಿಡಿಯೋ ಕ್ಯಾಮೆರಾಗಳ ಉಚಿತ ತಪಾಸಣೆ ಶಿಬಿರ ಮತ್ತು ಹಿರಿಯ ಹಾಗೂ ಉದಯೋನ್ಮುಖ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಜೆ 6ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ವಹಿಸಲಿದ್ದಾರೆ ಎಂದು ಹೇಳಿದರು. ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ತಿಪ್ಪೇಸ್ವಾಮಿ ಮಾತನಾಡುತ್ತಾ, ಸಹಕಾರಿಯ 8ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಅದೇ ದಿನ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ದುಗ್ಗಪ್ಪ, ಅರುಣ್ ಕುಮಾರ್ ಬಿ.ಪಾಟೀಲ್, ಕೆ.ಪಿ. ನಾಗರಾಜ್, ಕೆ.ಬಿ. ಕಿರಣ್ ಕುಮಾರ್, ಕೆ. ಪ್ರಕಾಶ್, ಅರುಣ್ ಕುಮಾರ್ ಎನ್., ಕಿಶೋರ್ ಕುಮಾರ್ ಟಿ., ಮಹಾಂತೇಶ್ ಹೆಚ್.ಎಸ್. ಉಪಸ್ಥಿತರಿದ್ದರು.