ಜಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ನೆರವು

ಜಗಳೂರಿನಲ್ಲಿ ಡಿಜಿಟಲ್  ಗ್ರಂಥಾಲಯ ಸ್ಥಾಪನೆಗೆ ನೆರವು

ನೂತನ ಗ್ರಂಥಾಲಯ ಉದ್ಘಾಟನೆಯಲ್ಲಿ ಶಾಸಕ ದೇವೇಂದ್ರಪ್ಪ

ಜಗಳೂರು, ಸೆ. 9 – ಪಟ್ಟಣದಲ್ಲಿ ಸುಸಜ್ಜಿತ ಗ್ರಂಥಾ ಲಯ ಹಾಗೂ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸಂಪೂರ್ಣ ನೆರವು ನೀಡುವುದಾಗಿ ಶಾಸಕ ಬಿ. ದೇವೇಂದ್ರಪ್ಪ ಭರವಸೆ ವ್ಯಕ್ತಪಡಿಸಿದರು.

ಪಟ್ಟಣದ ಹಳೆಯ ಪಟ್ಟಣ ಪಂಚಾಯತಿ ನವೀಕೃತ ಕಟ್ಟಡದಲ್ಲಿ ಇಂದು ಶಾಖಾ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಬಹುದಿನಗಳಿಂದ ಬಾಡಿಗೆ ಕಟ್ಟಡದಲ್ಲಿದ್ದ ಗ್ರಂಥಾಲಯ ಇಂದು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದು ಸಂತಸ ತಂದಿದೆ ಎಂದರು.

ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ತೆರೆ ಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಅಗತ್ಯವಾದ ಎಲ್ಲ ಪುಸ್ತಕಗಳು ಕಂಪ್ಯೂಟರ್ ಹಾಗೂ ಓರ್ವ ಸಂಪನ್ಮೂಲ ವ್ಯಕ್ತಿಯನ್ನು ಒದಗಿಸುವುದಾಗಿ ಶಾಸಕರು ತಿಳಿಸಿದರು.

ಗ್ರಂಥಾಲಯಗಳು ಜ್ಞಾನದ ಹೆಬ್ಬಾಗಿಲು ಇದ್ದಂತೆ. ಅತ್ಯಂತ ಮಹತ್ವವಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುವ ಸಂಕಲ್ಪ ನನ್ನದು. ಐಎಎಸ್ ಪರೀಕ್ಷೆಯಿಂದ ಹಿಡಿದು, ಸಾಮಾನ್ಯ ಗುಮಾಸ್ತರ ಪರೀಕ್ಷೆಗೂ ಸಿದ್ಧವಾಗಲು ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ, ಕಂಪ್ಯೂಟರ್‌ಗಳನ್ನು ನೀಡುವೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಶಾಸಕನಾಗಿ 106 ದಿನಗಳಾದರೂ ಯಾರೋ ಬಂದು ನನಗೆ ಗ್ರಂಥಾಲಯಕ್ಕೆ ಕಟ್ಟಡ ಕೊಡಿ ಎಂದು ಕೇಳಲಿಲ್ಲ, ಆದರೆ ಕಾಮಗಾರಿ ಕೊಡಿ, ಮನೆ ಕೊಡಿ, ಬೋರ್‌ವೆಲ್ ಕೊಡಿ ಎಂದು ಕೇಳುವವರೇ ಹೆಚ್ಚು. ಶಿಕ್ಷಣದ ಮಹತ್ವ ಅರಿತಿರುವ ನಾನು ವಿದ್ಯಾರ್ಥಿ ಯುವಜನರ ಉತ್ತಮ ಭವಿಷ್ಯಕ್ಕಾಗಿ  ಗ್ರಂಥಾಲಯಕ್ಕೆ ಶಾಶ್ವತ ಕಟ್ಟಡ ಕಲ್ಪಿಸಿ ಕೊಟ್ಟಿದ್ದೇನೆ ಎಂದರು.

ಮಳೆಗಾಲ ಕೈ ಕೊಟ್ಟಿದೆ. ರೈತರು ಸಂಕಷ್ಟದಲ್ಲಿದ್ದಾರೆ. 57 ಕೆರೆ ಯೋಜನೆಯಲ್ಲಿ 11 ಕೆರೆಗಳಿಗೆ ನೀರು ಹರಿದಿದೆ, ಉಳಿದ ಕೆರೆಗಳಿಗೂ ನೀರು ಹರಿಸಲಾಗುವುದು. ವಿದ್ಯುತ್ ಅಭಾವ ಉಂಟಾಗಿದ್ದು, ಟಿಸಿಗಳನ್ನು ರೈತರಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಂಡಿರುತ್ತೇನೆ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಯತ್ನಿಸುವೆ.

ಶೀಘ್ರವೇ ಮುಕ್ತಿ ವಾಹನ ನೀಡುವೆ ಮತ್ತು ಅನಾಥ ಶವಗಳ ಸಂಸ್ಕಾರಕ್ಕೆ ನೆರವು ನೀಡುವುದಾಗಿ ಶಾಸಕರು ಭರವಸೆ ವ್ಯಕ್ತಪಡಿಸಿದರು.

ರಾಜ್ಯ ಗ್ರಂಥಾಲಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಜ್ಞಾನವೇ ಶಕ್ತಿಯಾಗಿದ್ದು ಗ್ರಂಥಾಲಯಗಳು ಮತ್ತು ಪುಸ್ತಕಗಳು ಬಾಳಿಗೆ ದಾರಿದೀಪವಾಗಿವೆ ಎಂದರು.

2020ರಲ್ಲಿ ಆರಂಭಿಸಲಾದ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯಕ್ಕೆ ಈವರೆಗೆ 3.56 ಕೋಟಿ ಓದುಗರು ನೋಂದಾಯಿಸಿ ಕೊಂಡಿದ್ದು, ಆನ್‌ಲೈನ್‌ನಲ್ಲಿ 1.3 ಕೋಟಿ ಪುಸ್ತಕ ಗಳು ಉಚಿತವಾಗಿ ಲಭ್ಯವಿವೆ ವಿದ್ಯಾರ್ಥಿ ಯುವ ಜನರು, ಸಾರ್ವಜನಿಕರು ಇಲ್ಲಿ ನೋಂದಾಯಿಸುವ ಮೂಲಕ ಡಿಜಿಟಲ್ ಲೈಬ್ರರಿಯನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಗ್ರಂಥಾಲಯ ಇಲಾಖೆಯ ನಿರ್ದೇಶಕ ಟಿ.ಆರ್. ತಿಪ್ಪೇಸ್ವಾಮಿ, ಗ್ರಂಥಾಲಯ ಅಧಿಕಾರಿ ಶರಣಪ್ಪ, ತಾಂ. ಇಓ.  ಚಂದ್ರಶೇಖರ್, ನಿಕಟ ಪೂರ್ವ ಸಭಾಪತಿಗಳ ಆಪ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಎಸ್. ಟಿ. ಘಟಕದ ಅಧ್ಯಕ್ಷ
ಕೆ. ಪಿ. ಪಾಲಯ್ಯ, ಸಿಪಿಐ ಶ್ರೀನಿವಾಸ್ ರಾವ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಶೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ಪಟೇಲ್, ನೌಕರ ಸಂಘದ ಅಧ್ಯಕ್ಷ ಚಂದ್ರಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಾಲಯ್ಯ, ಹಿರಿಯ ಸಾಹಿತಿ  ಎನ್.ಟಿ.ಎರಿಸ್ವಾಮಿ,
ಡಿ.ಸಿ. ಮಲ್ಲಿಕಾರ್ಜುನ್, ಕೆ. ಸುಜಾತಮ್ಮ,  ಗೀತಾ ಮಂಜುನಾಥ್ ಮತ್ತು ಇತರರು  ಉಪಸ್ಥಿತರಿದ್ದರು.

error: Content is protected !!