ನೆಲ, ಜಲ, ಭಾಷೆಯ ಸೌಲಭ್ಯ ವಂಚಿತ ಕನ್ನಡಿಗರ ಹೋರಾಟ ಅವಶ್ಯ

ನೆಲ, ಜಲ, ಭಾಷೆಯ ಸೌಲಭ್ಯ  ವಂಚಿತ ಕನ್ನಡಿಗರ ಹೋರಾಟ ಅವಶ್ಯ

ರಾಣೇಬೆನ್ನೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ

ರಾಣೇಬೆನ್ನೂರು, ಸೆ,10- ನಾಡಿನ ನೆಲ, ಜಲ ಹಾಗೂ ಭಾಷೆಯ ರಕ್ಷಣೆ ಜೊತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕನ್ನಡಿಗರ ಪರವಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ  ಪಿ. ಕೃಷ್ಣೇಗೌಡ ಹೇಳಿದರು. 

ಇಲ್ಲಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿಂದು ನಡೆದ ರಾಜ್ಯ ಕಾರ್ಯಕಾರಿಣಿ ಚಿಂತನ ಮಂಥನ ಬೃಹತ್ ಸಮಾವೇಶದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ  ಕಟ್ಟಕಡೆಯ ಕನ್ನಡಿಗನನ್ನು ಮುನ್ನೆಲೆಗೆ ತರುವ ಕೆಲಸವಾಗಿಲ್ಲ. ನನಗೆ ಮಂತ್ರಿ ಗೊತ್ತು, ಅಧ್ಯಕ್ಷ ಗೊತ್ತು ಎಂದು ಧಮಕಿ ಹಾಕುವ ಅಧಿಕಾರಿಗಳು, ಶಿಕ್ಷಕರು ಕಂಡು ಬರುತ್ತಿದ್ದಾರೆ. ಅಂಥವರ ಬಗ್ಗೆ ಜನಪ್ರತಿನಿಧಿಗಳು ಯೋಗ್ಯ ಕ್ರಮ ಜರುಗಿಸಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸಿದೆ. ಜನರ ಸ್ವಾಭಿಮಾನಕ್ಕೆ ದಕ್ಕೆ ತರುವ ಇಂತವರ ಬಗ್ಗೆ ನಮ್ಮ ಬಣ ತೀವ್ರತರದ ಹೋರಾಟ ನಡೆಸಲಿದೆ ಎಂದು ಕೃಷ್ಣೇಗೌಡ ಎಚ್ಚರಿಸಿದರು.

ಬಸವರಾಜ ಬೊಮ್ಮಾಯಿ ಈ ಭಾಗದ ಅದರಲ್ಲೂ ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸಿದರೂ ಸಹ ಹೇಳಿಕೊಳ್ಳುವಂತಹ ಅಭಿವೃದ್ಧಿ ಮಾಡಲಿಲ್ಲ. ನಾನು ಕಂಡಂತೆ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಬಹಳಷ್ಟು ವಂಚನೆಗೀಡಾಗಿದೆ.  ಇಲ್ಲಿನ ಜನಪ್ರತಿನಿಧಿಗಳು ಆ ಬಗ್ಗೆ ಹೆಚ್ಚಿನ ಚಿಂತನೆ ಮಾಡಿಲ್ಲ. ನಮ್ಮ ಬಣ ಈ ಬಗ್ಗೆ ಇಂದು `ಚಿಂತನ ಮಂಥನ’ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕೃಷ್ಣೇಗೌಡ ಹೇಳಿದರು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಶನೇಶ್ಚರ ಮಠದ ಶ್ರೀ ಶಿವಯೋಗಿ ಶಿವಾ ಚಾರ್ಯ ಮತ್ತು ಬಂಕಾಪೂರ ಅರಳೆಲೆ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ದ್ವಯರು ಕನ್ನಡಿಗರ ಪರ ಧ್ವನಿ ಎತ್ತುವ ಈ ಸಂಘಟನೆಯ ಕಾರ್ಯಗಳಿಂದ ನಾಡಿನ ಸರ್ವತೋಮುಖ ಅಭಿವೃದ್ಧಿ ಆಗಲಿ ಎಂದು ಶುಭಾಶೀರ್ವಾದ ಮಾಡಿದರು.

ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಸದಸ್ಯರು, ಮತ್ತಿತರರು ಭಾಗವಹಿಸಿದ್ದ  ಕನ್ನಡಾಂಬೆಯ ಮೆರವಣಿಗೆ ಇಲ್ಲಿನ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟು ಸಮಾವೇಶದ ಸ್ಥಳ ಮೃತ್ಯುಂಜಯ ಕಲ್ಯಾಣ ಮಂಟಪಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು,  ಕನ್ನಡ ಧ್ವಜಗಳೊಂದಿಗೆ ಕುಣಿದು, ಕುಪ್ಪಳಿಸಿದರು.

error: Content is protected !!