ಹಂದರ ಕಂಬಕ್ಕೆ ಪೂಜೆ ಸಲ್ಲಿಸಿದ ಸಚಿವ ಮಲ್ಲಿಕಾರ್ಜುನ್, ಮಾಜಿ ಸಚಿವ ರವೀಂದ್ರನಾಥ್
ದಾವಣಗೆರೆ, ಆ. 21- ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಗಣೇಶ ಮಹೋತ್ಸವದ ಆಚರಣೆಗಾಗಿ ಸೋಮವಾರ ಹಂದರ ಕಂಬದ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಹಂದರ ಕಂಬಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಸಚಿವ ಎಸ್ಸೆಸ್ಸೆಂ, ಸಂತೋಷದಿಂದಲೇ ಹಂದರ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದೇನೆ. ಗಣೇಶೋತ್ಸವ ಯಶಸ್ವಿಯಾಗಿ ಜರುಗಲಿ, ನಾಡಿನಾದ್ಯಂತ ಉತ್ತಮ ಮಳೆ ಬರಲಿ. ಜಲಾಶಯಗಳು ತುಂಬಲಿ ಜನರು ಸಂತೋಷವಾಗಿರುವಂತಾಗಲಿ ಎಂದು ಆಶಿಸಿದರು.
ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಜನ್ಮ ದಿನದ ಕಾರ್ಯಕ್ರಮ ಸಿದ್ದರಾಮೋತ್ಸವಕ್ಕೂ ಆರಂಭದಲ್ಲಿ ನಾನೇ ಪೂಜೆ ಸಲ್ಲಿಸಿದ್ದೆ. ಕಾರ್ಯಕ್ರಮ ಯಶಸ್ವಿಯಾಗಿ ಅವರು ಮುಖ್ಯಮಂತ್ರಿಯಾದರು. ಹಾಗೆಯೇ ನಮ್ಮ ಕೈ ಗುಣ ಉತ್ತಮವಾಗಿದೆ. ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಸಚಿವರು ಹೇಳಿದರು.
ಹಿಂದೂ ಮಹಾ ಗಣಪತಿ ಸಮಿತಿಯ ಜೊಳ್ಳಿ ಗುರು ಮಾತನಾಡಿ, ಹಿಂದಿನ ವರ್ಷಗಳಿಗಿಂತ ವಿಜೃಂಭಣೆಯಿಂದ, ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಈ ಬಾರಿ 50×100 ಅಡಿ ಅಳತೆಯಲ್ಲಿ ಕೇದಾರನಾಥ ಮಹಾ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ. ಉದ್ಘಾಟನೆಗೆ ಕೇದಾರ ಶ್ರೀಗಳು ಬರುವುದಾಗಿ ಹೇಳಿದ್ದಾರೆ. ಕಣ್ವಕುಪ್ಪಿ ಶ್ರೀಗಳೂ ಸಹ ಆಗಮಿಸಲಿದ್ದಾರೆ ಎಂದು ಹೇಳಿದರು. ಗಣೇಶೋತ್ಸವ ಆಚರಣೆಗೆ ಸಾರ್ವಜನಿಕರಿಂದ ಸಾಕಷ್ಟು ಹಣ ಬರುತ್ತದೆ, ರಾಜಕಾರಣಿಗಳು ದೇಣಿಗೆ ಕೊಡುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸದಸ್ಯರು ಹಣ ಕೂಡಿಸಿ ಅದ್ದೂರಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಯಾರಿಂದಲೂ ದೇಣಿಗೆ ಪಡೆದಿಲ್ಲ. ಊಹಾಪೋಹಗಳಿಗೆ ಜನರು ಆಸ್ಪದ ನೀಡಬಾರದು ಎಂದು ಹೇಳಿದರು.
2019ರಲ್ಲಿ ದೇಣಿಗೆ ಸಂಗ್ರಹಿಸಿದ್ದೆವು. ಆಗ 8 ಲಕ್ಷ ಮಾತ್ರ ಬಂದಿತ್ತು. ಹೀಗಾಗಿ ಮುಂದೆ ಯಾರನ್ನೂ ದೇಣಿಗೆ ಕೇಳಬಾರದು ಎಂದು ನಿರ್ಧಿರಿಸಿ, ಅಂದಿನಿಂದ ಇಂದಿನವರೆಗೆ ಯಾರಿಗೂ ದೇಣಿಗೆ ಕೇಳಿಲ್ಲ. 40 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ದೇಣಿಗೆ ನೀಡುವುದಾದರೆ ಪ್ರಸಾದಕ್ಕೆ ದವಸ-ಧಾನ್ಯ ನೀಡಬಹುದಾಗಿದೆ ಎಂದು ಜೊಳ್ಳಿ ಗುರು ಹೇಳಿದರು.
ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷರುಗಳಾದ ದೇವರಮನೆ ಶಿವಕುಮಾರ್, ಕೆ.ಎಂ. ಸುರೇಶ್, ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಗಡಿಗುಡಾಳ್ ಮಂಜುನಾಥ್, ಎ.ನಾಗರಾಜ್, ಮಾಜಿ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ಡಿ.ಕೆ. ಕುಮಾರ್ ಸೇರಿದಂತೆ ಕೆ.ಬಿ. ಶಂಕರ್ ನಾರಾಯಣ, ಟಿಂಕರ್ ಮಂಜಣ್ಣ, ಚುಕ್ಕಿ ಮಂಜು, ಶ್ರೀನಿವಾಸ ದಾಸಕರಿಯಪ್ಪ, ಕೆ.ಎನ್. ಓಂಕಾರಪ್ಪ, ಈಶ್ವರ ಸಿಂಗ್ ಕವಿತಾಳ, ಚೇತನಾ ಶಿವಕುಮಾರ್, ಭಾಗ್ಯ ಪಿಸಾಳೆ, ರೇಣುಕಾ ಇತರರು ಈ ಸಂದರ್ಭದಲ್ಲಿದ್ದರು.