ಅರ್ಹ 1,100 ರೈತರಿಗೆ ಹಣ ಪಾವತಿಸಲು ಆದೇಶ
ದಾಖಲೆ ತಿರುಚಿ ಸರ್ಕಾರಕ್ಕೆ ವಂಚಿಸಲು ಯತ್ನಿಸಿದ ರೈತರ ವಿರುದ್ಧವೂ ದೂರಿಗೆ ಆದೇಶ
ಜಗಳೂರು, ಜು.8- ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ರಾಜ್ಯ ಸರ್ಕಾರ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮತ್ತು ರೈತರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ನೂತನ ಶಾಸಕ ಬಿ.ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ರೈತರ ನಿಯೋಗ, ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕಾಗಿ ಅಹವಾಲು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡಿರುವ ಸಚಿವರು, ರಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದ ತಾಲ್ಲೂಕಿನ 1,100 ರೈತರಿಗೆ ಹಣ ಪಾವತಿಸುವಂತೆ ಆದೇಶ ನೀಡಿದ್ದಾರೆ.
ತಾಲ್ಲೂಕಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೈತರು ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದಾರೆ. ಇದುವರೆಗೂ ಅರ್ಹ ರೈತರಿಗೆ ಹಣ ಪಾವತಿಸದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಅರ್ಹ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೆಸರಿನಲ್ಲಿ ದಲ್ಲಾಳಿಗಳು ಹಾಗೂ ರೈತರಲ್ಲದವರಿಗೆ ಹಣ ಪಾವತಿಸಿದ್ದು, ಅರ್ಹ ರೈತರಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಶಾಸಕ ದೇವೇಂದ್ರಪ್ಪ ಸಚಿವರಿಗೆ ಮನವರಿಕೆ ಮಾಡಿದ್ದರು.
ಸಚಿವರ ಸೂಚನೆ ಮೇರೆಗೆ ಸರ್ಕಾರದ ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧೀನ ಕಾರ್ಯ ದರ್ಶಿ ಎ.ಹನುಮಂತರಾಜು ಅವರು ಅರ್ಹ 1,100 ರೈತರಿಗೆ ಹಣ ಪಾವತಿಸಲು ಆದೇಶ ನೀಡಿದ್ದಾರೆ. ರಾಗಿ ಖರೀದಿ ಕೇಂದ್ರದ ಅವ್ಯಹಾರಕ್ಕೆ ಕಾರಣರಾದ ಡಾಟಾ ಎಂಟ್ರಿ ಆಪರೇಟರ್ ಬಿಳಿಚೋಡು ಗಿರೀಶ್ ಹಾಗೂ ಜೆ.ಎಂ. ನವೀನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಹಾಗೂ ಖರೀದಿ ಕೇಂದ್ರದ ವ್ಯವಸ್ಥಾಪಕರಾಗಿದ್ದ ಈಚೆಗೆ ಮೃತಪಟ್ಟಿರುವ ದಿವಂಗತ ಶಂಕರ್ ಅವರಿಗೆ ಸರ್ಕಾರದಿಂದ ನೀಡುವ ಎಲ್ಲಾ ಸೌಲಭ್ಯ ಗಳನ್ನು ತಡೆಹಿಡಿಯಬೇಕೆಂದು ಆದೇಶ ನೀಡಿದ್ದಾರೆ.
ಅರ್ಹ ರೈತರಿಗೆ ಹಣ ಪಾವತಿಸುವುದು ಮತ್ತು ಅನರ್ಹ ಎಂದು ಕಂಡು ಬಂದ ಹಾಗೂ ನಕಲಿ ಮತ್ತು ತಿರುಚಿದ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ವಂಚಿಸಲು ಪ್ರಯತ್ನಿಸಿದ ರೈತರ ವಿರುದ್ಧವೂ ಪೊಲೀಸ್ ಠಾಣೆಗೆ ದೂರು ನೀಡಲು ಆದೇಶದಲ್ಲಿ ಸೂಚನೆ ನೀಡಲಾಗಿದೆ.