ಕನ್ನಡ ನಾಡಿನ ಸುವರ್ಣ ಯುಗದ ಪರಿವರ್ತಕ ನಾಲ್ವಡಿ ಕೃಷ್ಣರಾಜ ಒಡೆಯರ್‌

ಕನ್ನಡ ನಾಡಿನ ಸುವರ್ಣ ಯುಗದ ಪರಿವರ್ತಕ ನಾಲ್ವಡಿ ಕೃಷ್ಣರಾಜ ಒಡೆಯರ್‌

ಜಿಲ್ಲಾ ಕಸಾಪ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ವೈ.ಎಂ. ವಿಠಲರಾವ್

ದಾವಣಗೆರೆ, ಜೂ. 4- ಸಮಾಜ ಸುಧಾರಣೆಗಾಗಿ ದೇವದಾಸಿ ಪದ್ಧತಿ ನಿಷೇಧ, ವಿಧವೆಯರಿಗೆ ಮರು ವಿವಾಹ,  ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆ ನಿಷೇಧದಂತಹ ಸಾಮಾಜಿಕ ಕಳಕಳಿಯ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಮಾಜಿಕ ಕಾನೂನುಗಳ ಹರಿಕಾರ ಎಂಬ ಬಿರು ದಿಗೆ ಪಾತ್ರರಾದವರು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ವೈ.ಎಂ. ವಿಠಲರಾವ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ `ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡು, ನುಡಿಗೆ ನೀಡಿದ ಕೊಡುಗೆಗಳು’ ವಿಷಯ ಕುರಿತು ಮಾತನಾಡಿದರು.

1918 ರಲ್ಲಿ ಮಿಲ್ಲರ್ ಆಯೋಗ ರಚಿಸಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದರಿಂದ ಅವರು ಮೀಸಲಾತಿ ಜನಕ ಎಂದು ಕರೆಯಲ್ಪಟ್ಟರು. ನಾಡಿನ ಸುವರ್ಣ ಯುಗದ ಪರಿವರ್ತಕ ಎಂದೇ ಗೌರವಿಸಲ್ಪಟ್ಟಿದ್ದಾರೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ತಿಳಿಸಿಕೊಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲವನ್ನು ಸುವರ್ಣಯುಗ ಎಂದು ಕರೆಯ ಲ್ಪಟ್ಟಿದ್ದು, ಇವರ ಆಡಳಿತ ಅವಧಿಯಲ್ಲಿ ಶೈಕ್ಷಣಿಕ, ಆರ್ಥಿಕ, ಕೈಗಾರಿಕಾ, ನೀರಾವರಿ, ಸಾಮಾಜಿಕ ಕ್ಷೇತ್ರ, ಸ್ಥಳೀಯ ಸಂಸ್ಥೆಗಳ ರಚನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದರು ಎಂದು ಹೇಳಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ, ವಯಸ್ಕರ ಶಿಕ್ಷಣ, ವಾಣಿಜ್ಯ ಶಾಲೆಗಳನ್ನು ಪ್ರಾರಂಭಿಸಿದರು. 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.

1905 ರಲ್ಲಿ ಸಹಕಾರಿ ಸೊಸೈಟಿ ಜಾರಿಗೆ ತರುವುದರ ಮೂಲಕ ರೈತರಿಗೆ ನೆರವಾದರು. 1902 ರಲ್ಲಿ ಏಷ್ಯಾ ಖಂಡದಲ್ಲಿಯೇ ಮೊದಲನೆಯದಾಗಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ತಂದರು. ಮೈಸೂರು ಸ್ಟೇಟ್ ಬ್ಯಾಂಕ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಗಳೂರು ಹೆಂಚು ಕಾರ್ಖಾನೆ ಸ್ಥಾಪಿಸಿ ಕೈಗಾರಿಕಾ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು.

1907 ರಲ್ಲಿ ವಾಣಿ ವಿಲಾಸ ಸಾಗರ, 1911 ರಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿ ನೀರಾವರಿ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದಾರೆ. ಒಟ್ಟಾರೆ 38 ವರ್ಷಗಳ ದಕ್ಷ ಆಡಳಿತ ನಡೆಸಿ ರಾಜರ್ಷಿ ಎಂದೇ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಇಂದು ಕನ್ನಡ ಸಾಹಿತ್ಯ ಪರಿಷತ್ತು ಇವರ 139 ನೇ ಜನ್ಮ ದಿನವನ್ನು ಆಚರಿಸುತ್ತಿರುವುದು ಅತ್ಯಂತ ಪ್ರಸ್ತುತ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಡಾ.ಎಂ.ಎಂ. ಪಟ್ಟಣಶೆಟ್ಟಿ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುತ್ತಾ, ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಕಸಾಪ ಮಾಡಿದೆ ಎಂದರು.

ಕೋವಿಡ್ ಸಂದರ್ಭದಲ್ಲೂ ಸಹ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು ಅಂತರ್ಜಾಲದ ಮೂಲಕ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ಆಯೋಜಿಸಿ ನಾಡಿನ ಉದ್ದಗಲಕ್ಕೂ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿಗೆ ಭಾಜನರಾಗಿದ್ದಾರೆಂದು ಪ್ರಶಂಸಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ  ಮಾತನಾಡಿ,  ನಾಲ್ವಡಿ ಕೃಷ್ಣರಾಜ ಒಡೆಯರ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಧನೆಗಳು ನಮ್ಮ ಕಣ್ಮುಂದೆ ಇವೆ. ಅವರು ಹಿಂದಿಗಿಂತಲೂ ಇಂದು ಪ್ರಸ್ತುತವಾಗಿವೆ ಎಂದು ಹೇಳಿದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ದಿಳ್ಳೆಪ್ಪ, ರೇವಣಸಿದ್ಧ ಪ್ಪ ಅಂಗಡಿ, ದಾವಣಗೆರೆ ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಚಂದ್ರಿಕಾ ಮಂಜುನಾಥ್ ಉಪಸ್ಥಿತರಿದ್ದರು.

ಜಾನಪದ ವಿದ್ವಾಂಸರಾದ ಡಾ.ಎಂ.ಜಿ. ಈಶ್ವರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜನಪ್ಪ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ. ಮಂಜುನಾಥ್, ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಹೆಚ್.ವಿ. ವಾಮದೇವಪ್ಪ, ಕೆ.ಎನ್.ಸ್ವಾಮಿ, ಎಸ್.ಎಂ. ಮಲ್ಲಮ್ಮ, ರುದ್ರಾಕ್ಷಿಬಾಯಿ, ಎಲ್.ಜಿ. ಮಧುಕುಮಾರ್, ಸುದರ್ಶನ್, ಬಿ. ಪಾಲಾಕ್ಷಿ, ಕೆ. ಶಿವಶಂಕರ್, ದಾಗಿನಕಟ್ಟೆ ಪರಮೇಶ್ವರಪ್ಪ, ನಾಗರಾಜ ಸಿರಿಗೆರೆ, ನಾಗವೇಣಿ, ಬಿ.ವಿ. ಪರಿಮಳ ಜಗದೀಶ್, ವೀಣಾ ಕೃಷ್ಣಮೂರ್ತಿ, ಕುಸುಮ ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

ವಿನೂತನ ಮಹಿಳಾ ಮಂಡಳಿಯ ಚಂದ್ರಿಕಾ ಮಂಜುನಾಥ ಸಂಗಡಿಗರು ನಾಡಗೀತೆ ಹಾಡಿದರು. ಬಿ. ದಿಳ್ಳೆಪ್ಪ ಸ್ವಾಗತಿಸಿದರು. ರೇವಣಸಿದ್ಧಪ್ಪ ಅಂಗಡಿ ನಿರೂಪಿಸಿದರು. ಜಿಗಳಿ ಪ್ರಕಾಶ್ ವಂದಿಸಿದರು. 

error: Content is protected !!