ದಾವಣಗೆರೆ, ಮೇ 26 – ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಅವರು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ಬಾಂಧವರು ಸೂಕ್ತ ತಂತ್ರಜ್ಞಾನಗಳನ್ನು ಸರಿಯಾದ ಸಮಯಕ್ಕೆ ಬಳಸುವುದರಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಮಲ್ಲಿಕಾರ್ಜುನ ಬಿ.ಓ. ಬೇಸಾಯ ತಜ್ಞರು ರೈತ ಬಾಂಧವರು ಮುಂಗಾರಿನ ಪೂರ್ವ ಸಿದ್ಧತೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವುದು ಸೂಕ್ತ ಎಂದರು.
ಅದರಂತೆ ಮೊದಲಿಗೆ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರದ ಬಳಕೆ, ಜೈವಿಕ ಗೊಬ್ಬರಗಳಿಂದ ಬೀಜೋಪಚಾರ, ಕೃಷಿ ಹೊಂಡ, ಕಂದಕ ಬದುಗಳು ಹಾಗೂ ಬದುಗಳನ್ನು ಮಳೆ ಬರುವ ಮುಂಚೆ ಸ್ವಚ್ಛ ಮಾಡುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆಯನ್ನು ಮಾಡಬಹುದು ಎಂದರು. ಅಧಿಕ ಇಳುವರಿ ಕೊಡುವ ತಳಿ ಮತ್ತು ಹೈಬ್ರಿಡ್ ಗಳನ್ನು ಅಧಿಕೃತ ಮಾರಾಟಗಾರರಿಂದ ಕೊಳ್ಳುವುದು ಬಹಳ ಸೂಕ್ತ. ಏಕ ಬೆಳೆ ಪದ್ಧತಿ ಮೆಕ್ಕೆಜೋಳವನ್ನು ಬೆಳೆಯುವ ಬದಲು ಅಕಡಿ ಬೆಳೆಯಾಗಿ ತೊಗರಿಯನ್ನು ಬೆಳೆಯುವುದು ಸೂಕ್ತ. ತೊಗರಿಯ ತಳಿಗಳಾದ ಬಿಆರ್ಜಿ5, ಟಿಎಸ್ 3 ಆರ್ 2 ಕೆ.ಜಿ ಪ್ರತಿ ಎಕರೆಗೆ ಬೆಳೆಸಿ ಬಿತ್ತನೆ ಮಾಡುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.