ಪ್ರೊ. ಬಿಸ್ವಾಲ್
ದಾವಣಗೆರೆ, ಮೇ 25- ವಾಸ್ತವಿಕ ನೆಲೆಯಲ್ಲಿ ನಿಂತು, ವೈಜ್ಞಾನಿಕ ಆಲೋಚನೆಗಳೊಂದಿಗೆ ಜನಪರ ಕಾಳಜಿಯ ಸಂಶೋಧನೆಗಳು ಇಂದಿನ ಅಗತ್ಯವಾಗಿವೆ. ಸಂಶೋಧ ನೆಯು ಜೀವನದ ಭಾಗವಾದಾಗ ಗುಣಮಟ್ಟದ ಫಲಿತಾಂಶ ವನ್ನು ನೀಡಲು ಸಾಧ್ಯ ಎಂದು ಹರಿಹರದ ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಪ್ರೊ. ಬಿಪ್ಲಬ್ ಕುಮಾರ್ ಬಿಸ್ವಾಲ್ ಅಭಿಪ್ರಾಯಪಟ್ಟರು.
ಐಸಿಎಸ್ಎಸ್ಆರ್ ದಕ್ಷಿಣ ಪ್ರಾದೇಶಿಕ ಕೇಂದ್ರ ತೆಲಂಗಾಣ, ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಜಂಟಿ ಆಶ್ರಯದಲ್ಲಿ ಬುಧವಾರ ಆರಂಭವಾದ ಸಮಾಜ ವಿಜ್ಞಾನದಲ್ಲಿ ಸಂಶೋಧನಾ ವಿಧಾನ ಕುರಿತು ಏಳು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪದವಿಗಾಗಿ ಸಂಶೋಧನೆ ಕೈಗೊಳ್ಳುವುದರಲ್ಲಿ ಯಾವುದೇ ಮೌಲ್ಯಗಳಿಲ್ಲ. ಸಮಾಜದ ಹಿತಕ್ಕಾಗಿ, ದೇಶದ ಉನ್ನತ ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಸಂಶೋಧನೆ ಕೈಗೊಳ್ಳಬೇಕು. ಮೌಲ್ಯಯುತ ಸಂಶೋಧನೆಗಳಿಗೆ ಮಾತ್ರ ಮನ್ನಣೆ ಇದೆ ಎಂದು ನುಡಿದರು. ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಯಾವುದೇ ರೀತಿಯ ರಾಜೀ ಸೂತ್ರ ಅನುಸರಿಸಬಾರದು ಎಂದರು.
ಸಮಾಜ ವಿಜ್ಞಾನದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಇದೆ. ಸಮಾಜದ ಪ್ರತಿಯೊಂದು ಅಭಿವೃದ್ಧಿಗೂ ಸಂಶೋಧನೆ ಆಧಾರಿತ ಅಂಕಿ-ಅಂಶಗಳ ದಾಖಲೆಗಳೇ ಮುಖ್ಯವಾಗಿವೆ. ವೈಜ್ಞಾನಿಕ ರೀತಿಯಲ್ಲಿ ಸಂಶೋಧನೆ ಕೈಗೊಂಡು, ದೇಶದ ಬೆಳವಣಿಗೆಗೆ ಪೂರಕವಾದ ಮಾರ್ಗದರ್ಶನ ನೀಡಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಮತ್ತು ಹೊಸತನ್ನು ಕಂಡುಕೊಳ್ಳುವ ಕುತೂಹಲ ಅತ್ಯವಶ್ಯ. ವಿಜ್ಞಾನ ಮತ್ತು ತಂತ್ರಜ್ಞಾನಗಳಷ್ಟೇ ಸಮಾಜ ವಿಜ್ಞಾನದ ಸಂಶೋಧನೆಗಳಿಗೂ ಮನ್ನಣೆ ಇದೆ. ಆದರೆ, ಅದಕ್ಕೆ ತಕ್ಕಂತೆ ಗುಣಮಟ್ಟವೂ ಮುಖ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ನಿಷ್ಠೆ, ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಸಂಶೋಧನಾ ಕಾರ್ಯವನ್ನು ನಿರ್ವಹಿಸಬೇಕು. ಪದವಿಗಾಗಿ ನಡೆಸುವ ಸಂಶೋಧನೆಗಿಂತ ಉತ್ತಮ ಭವಿಷ್ಯಕ್ಕಾಗಿ ಕೈಗೊಳ್ಳುವ ಸಂಶೋಧನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಮೌಲ್ಯಯುತ ಶೋಧನೆಗಳಿಗೆ ಗಮನ ನೀಡಬೇಕು. ಯಾವುದೇ ಮೂಲದಿಂದ ಮಾಹಿತಿ ಪಡೆದರೂ ಅದರ ಮೂಲ ಸಂಶೋಧಕರ ಹೆಸರನ್ನು ಉಲ್ಲೇಖಿಸುವ ಸೌಜನ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ವಿಭಾಗದ ಡೀನ್ ಪ್ರೊ. ಪಿ.ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ವಿಭಾಗದ ಡೀನ್ ಡಾ. ವೆಂಕಟೇಶ್, ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಜಿ.ಸುದರ್ಶನ ರೆಡ್ಡಿ ಉಪಸ್ಥಿತರಿದ್ದರು. ಕಾರ್ಯಾಗಾರದ ನಿರ್ದೇಶಕ ಡಾ.ಸತ್ಯನಾರಾಯಣ ಸ್ವಾಗತಿಸಿದರು. ಡಾ.ಎ.ಆಸೀಫ್ಉಲ್ಲಾ ಕಾರ್ಯಕ್ರಮ ನಿರೂಪಿಸಿದರು.