ಸೋತರೂ ಕೆಲವರ ಸಂಘಟನಾ ಶಕ್ತಿ, ಸೇವೆಯನ್ನು ಪಕ್ಷ ಅನೇಕ ಬಾರಿ ಬಳಸಿಕೊಂಡ ನಿದರ್ಶನಗಳು ಕಣ್ಣಮುಂದೆ ಇವೆ. ಅದೇ ರೀತಿ ನನಗೆ ಯಾವ ಸಂದರ್ಭ, ಯಾವ ರೀತಿಯ ಅಧಿಕಾರ ಕೊಡಬೇಕೆಂಬುದು ಪಕ್ಷಕ್ಕೆ ಗೊತ್ತಿದೆ. ಆ ವಿಶ್ವಾಸ ನನ್ನಲ್ಲಿ ಇದೆ.
-ಹೆಚ್. ಆಂಜನೇಯ, ಮಾಜಿ ಸಚಿವರು
ಚಿತ್ರದುರ್ಗ, ಮೇ 24- ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಬಳಿಕ, ನನಗೆ ಎಂಎಲ್ಸಿ ಮಾಡಿ, ಇತರೆ ಸ್ಥಾನಮಾನ ನೀಡುವಂತೆ ಹಲವೆಡೆ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ನಾನು ಚುನಾವಣೆಯಲ್ಲಿ ಸೋತ ಬಳಿಕ ಕಾರ್ಯಕರ್ತರು, ಬೆಂಬಲಿಗರು, ವಿವಿಧ ಸಂಘಟನೆಗಳ ಮುಖಂಡರು ನನಗೆ ಸ್ಥಾನಮಾನ ನೀಡುವಂತೆ ಆಗ್ರಹ, ಪ್ರತಿಭಟನೆ, ಹೇಳಿಕೆ, ಪತ್ರ ಚಳವಳಿ ಕೆಲ ದಿನಗಳಿಂದ ಎಲ್ಲೆಡೆ ನಡೆಸುತ್ತಿದ್ದು, ಈ ರೀತಿಯ ನಡೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ದಶಕಗಳ ಕಾಲ ಸಲ್ಲಿಸಿದ ನನ್ನ ಸೇವೆ, ಸಂಘಟನಾ ಶಕ್ತಿ ಗೊತ್ತಿದ್ದರಿಂದಲೇ ನನಗೆ ಅನೇಕ ಸ್ಥಾನಮಾನಗಳನ್ನು ನೀಡಿದೆ.
ಇತ್ತೀಚೆಗೆ ಅನೇಕರ ಪಿತೂರಿ, ಸುಳ್ಳು ಸುದ್ದಿಗಳಿಗೆ ಪಕ್ಷದ ವರಿಷ್ಠರು ಮನ್ನಣೆ ನೀಡದೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿ ಗೌರವಿಸಿದ್ದಾರೆ. ಆದರೆ, ತಾಯಿಗೆ ದ್ರೋಹ ಮಾಡುವ ರೀತಿ ಪಕ್ಷದಲ್ಲಿದ್ದುಕೊಂಡೇ ಕೆಲವರು ಕುತಂತ್ರ ನಡೆಸಿದ್ದರಿಂದ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು. ಆದರೂ ನಾನು ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಆದರೆ ನನ್ನನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಬೇಕೆಂಬ ಕೂಗು ಇತ್ತೀಚೆಗೆ ಎಲ್ಲೆಡೆಯೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆ, ಹೇಳಿಕೆಗಳ ಮೂಲಕ ನನಗೆ ಸ್ಥಾನಮಾನ ನೀಡುವಂತೆ ಧ್ವನಿಯೆತ್ತುತ್ತಿರುವ ಕಾರ್ಯಕರ್ತರು, ಹಲವು ಸಂಘಟನೆಗಳ ಮುಖಂಡರು ಹಾಗೂ ಬೆಂಬಲಿಗರ ಅಭಿಮಾನಕ್ಕೆ ನಾನು ಸದಾ ಕೃತಜ್ಞನಾಗಿರುವೆ. ಜೊತೆಗೆ ಈ ರೀತಿ ಒತ್ತಡದ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸದಂತೆಯೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪಕ್ಷ ಭಾರೀ ಬಹುಮತದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಐದು ವರ್ಷಗಳ ಕಾಲ ಸದೃಢ ಆಡಳಿತ ನೀಡಬೇಕೆಂಬ ಬದ್ಧತೆಯನ್ನು ನಮ್ಮ ನಾಯಕರು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಹಾಗೂ ನನ್ನ ಮೇಲಿನ ಅಭಿಮಾನದ ಕಾರಣಕ್ಕೆ ನನಗೆ ಸ್ಥಾನಮಾನ ನೀಡಬೇಕೆಂದು ಬೀದಿಗಿಳಿದು ಹೋರಾಟ ನಡೆಸುವುದು ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.
ಕಾರ್ಯಕರ್ತರ ಅಭಿಮಾನ ವನ್ನು ಗೌರವಿಸುವ ಜೊತೆಗೆ ಪಕ್ಷದ ಹಿತವನ್ನು ಕಾಪಾಡುವುದು ಪಕ್ಷದ ಕಟ್ಟಾಳಾದ ನನ್ನ ಜವಾಬ್ದಾರಿ ಆಗಿದೆ ಎಂದಿದ್ದಾರೆ. ಜನಪರ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರದ ಬೆನ್ನೆಲುಬು ಆಗಿ ನಿಲ್ಲಬೇಕು.
ಜೊತೆಗೆ ಪಕ್ಷ ದ್ರೋಹಿಗಳ ಕುರಿತು ಹೆಚ್ಚು ಜಾಗ್ರತೆ ವಹಿಸುವ ಮೂಲಕ ರಾಜ್ಯಾದ್ಯಂತ ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಈಗಲೇ ಸಂಘಟನೆಯತ್ತ ಗಮನಹರಿಸಬೇಕು. ಈ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೈಬಲಪಡಿಸಿ, ಜನನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಶ್ರಮಿಸಬೇಕು ಎಂದು ಆಂಜನೇಯ ಅವರು ಕಾರ್ಯಕರ್ತರನ್ನು ಕೋರಿದ್ದಾರೆ.