ಹರಪನಹಳ್ಳಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್
ಹರಪನಹಳ್ಳಿ, ಮೇ 20- ಆಟಿಕೆ ವಸ್ತುಗಳು, ಹಳೆಯ ಬಟ್ಟೆ, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ, ತ್ಯಾಜ್ಯ ವಸ್ತುಗಳನ್ನು ಮರುಬಳಕೆ, ಪುನರ್ ಬಳಕೆ ಕೇಂದ್ರಕ್ಕೆ ದೇಣಿಗೆ ನೀಡುವ ಮೂಲಕ ಸ್ವಚ್ಚ ನಗರ ಮಾಡಲು ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಹೇಳಿದರು.
ಪಟ್ಟಣದ ಗೊರವಿನ ತೋಟದಲ್ಲಿರುವ ಪುರಸಭೆ ಸಮುದಾಯ ಭವನದಲ್ಲಿ ಮರುಬಳಕೆ, ಪುನರ್ ಬಳಕೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ವೇಗವಾಗಿ ಜನಸಂಖ್ಯೆ ಬೆಳೆಯುತ್ತಿದ್ದು ನಗರ ಕೂಡ ಬೆಳವಣಿಗೆಯಾಗುತ್ತಿದ್ದು, ಸ್ವಚ್ಚತೆ ಕಡಿಮೆಯಾಗುತ್ತಿರುವ ಈ ದಿನಮಾನ ಗಳಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಪುಸ್ತಕ, ಬಟ್ಟೆ, ಮನೆಯಲ್ಲಿರುವ ಆಟಿಕೆ ಸಾಮಾನುಗಳನ್ನು ಪುರಸಭೆಯ ಆರ್.ಆರ್.ಆರ್ ಕೇಂದ್ರಕ್ಕೆ ಕೊಡುವುದರಿಂದ ಅವುಗಳನ್ನು ಮರುಬಳಕೆ ಮಾಡುವ ಮೂಲಕ ಇಡೀ ನಗರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬಹುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ್ ಮಾತನಾಡಿ, ಸ್ವಚ್ಚ ಭಾರತ್ ಮಿಷನ್ 2.0 ಯೋಜನೆ ಹಾಗೂ ನನ್ನ ಸ್ವಚ್ಚ ನಗರ ಯೋಜನೆ ಅಡಿಯಲ್ಲಿ ಮರುಬಳಕೆ, ಪುನರ್ ಬಳಕೆಗೆ ಬರುವ ವಸ್ತುಗಳಾದ ಆಟಿಕೆ ವಸ್ತುಗಳು, ಹಳೆಯ ಬಟ್ಟೆ, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಗ್ರಹ ಮಾಡಿ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕಳುಹಿಸಿ ಕೊಡುತ್ತೇವೆ. ಸಾರ್ವಜನಿಕರು ಗೊರವಿನ ತೋಟ ಹಾಗೂ ಹೊಂಬಳಗಟ್ಟಿ ರಸ್ತೆಯ ಬಳಿ ಇರುವ ಆರ್.ಆರ್.ಆರ್ ಕೇಂದ್ರಕ್ಕೆ ಕೊಟ್ಟರೆ ಅಂತವರಿಗೆ ಸಾವಯವ ಗೊಬ್ಬರ, ಲೇಖನ ಸಾಮಗ್ರಿಗಳು, ಡಿಜಿಟಲ್ ಪ್ರಮಾಣ ಪತ್ರ ನೀಡಿ, ಪ್ರೋತ್ಸಾಹಿಸಲಾಗವುದು ಎಂದರು.
ಸ್ವಚ್ಚ ಭಾರತ್ ಮಿಷನ್ 2.0 ಯೋಜನೆಯ ರಾಯಭಾರಿ ರವೀಂದ್ರ ಅಧಿಕಾರ್ ಮಾತನಾಡಿ, ಸರ್ಕಾರ ಆರ್.ಆರ್.ಆರ್ ಯೋಜನೆ ಜಾರಿಗೆ ತಂದಿದ್ದು, ಬೇಡವಾದ ವಸ್ತುಗಳನ್ನು ಆರ್.ಆರ್.ಆರ್ ಕೇಂದ್ರಕ್ಕೆ ಕೊಡಬೇಕು. ಈ ಯೋಜನೆ ಸಫಲತೆ ಕಾಣುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಪುರಸಭೆಯ ಪರಿಸರ ಅಭಿಯಂತರ ಅಮರೇಶ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಚಿದಾನಂದ ಸೇರಿದಂತೆ, ಇತರರು ಇದ್ದರು.