ಕೆವಿಕೆಯಲ್ಲಿ ವಿಶ್ವ ಜೇನು ದಿನಾಚರಣೆ

ಕೆವಿಕೆಯಲ್ಲಿ ವಿಶ್ವ ಜೇನು ದಿನಾಚರಣೆ

ದಾವಣಗೆರೆ, ಮೇ 21- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ  `ವಿಶ್ವ ಜೇನು ದಿನಾಚರಣೆ’ಯನ್ನು ಈ ವರ್ಷದ ಧ್ಯೇಯ ವಾಕ್ಯವಾದ `ಪರಾಗಸ್ಪರ್ಶ ಸ್ನೇಹಿ ಕೃಷಿ ಉತ್ಪಾದನೆಯಲ್ಲಿ ಜೇನು ನೊಣದ ಪಾತ್ರ’ ಎಂಬುದರೊಂದಿಗೆ ಆಚರಿಸಲಾಯಿತು. 

ಕಾರ್ಯಕ್ರಮವನ್ನುದ್ಧೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಷಯ ತಜ್ಞರು ಮಲ್ಲಿಕಾರ್ಜುನ್ ಬಿ.ಓ, ಬೇಸಾಯ ಶಾಸ್ತ್ರ ಕೃಷಿಯಲ್ಲಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ಅರಣ್ಯ ಇವುಗಳ ಜೊತೆ ಜೊತೆಗೆ ಜೇನು ಸಾಕಾಣಿಕೆಯನ್ನೂ ಮಾಡುವುದ ರಿಂದ ಬೆಳೆಗಳ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿಯೂ ಸದೃಢರಾಗಬಹುದೆಂದರು. 

ರಾಣೇಬೆನ್ನೂರು ತಾಲ್ಲೂಕು ಅಸುಂಡಿ ಗ್ರಾಮದ ಜೇನು ಸಾಕಾಣಿಕಾ ರೈತರಾದ ಮಲ್ಲಿಕಾರ್ಜುನ್‌ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ಕಳೆದ ಎಂಟು ವರ್ಷಗಳಿಂದ ಜೇನು ಸಾಕಾಣಿಕೆಯನ್ನು ಮಾಡುತ್ತಿದ್ದು, ರೈತ ಬಾಂಧವರು ಜೇನು ಸಾಕಾಣಿಕೆಯನ್ನು ಒಂದು ಪ್ರವೃತ್ತಿಯನ್ನಾಗಿ ಅಳವಡಿಸಿಕೊಳ್ಳಬಹುದೆಂದು ಹಾಗೂ ಜೇನು ಸಾಕಾಣಿಕೆ ಮಾಡುವ ಮುನ್ನ ರೈತರು ಗಮನ ಹರಿಸಬೇಕಾಗಿರುವ ಅಂಶಗಳನ್ನು ತಿಳಿಸಿದರು. 

ಡಾ. ಅವಿನಾಶ್ ಟಿ.ಜಿ., ಸಸ್ಯ ಸಂರಕ್ಷಣಾ ವಿಜ್ಞಾನಿಗಳು ಮಾತನಾಡಿ, ವಿಶ್ವ ಸಂಸ್ಥೆಯು 2018 ರಿಂದ ಪ್ರತಿ ವರ್ಷ ಮೇ 20 ರಂದು ಜೇನು ಸಾಕಾಣಿಕೆಯ ಪ್ರವರ್ತಕರಾದ ಆಂಟನ್ ಜಾನ್ಸ್‍ರ ಹುಟ್ಟು ಹಬ್ಬದ ಅಂಗವಾಗಿ `ವಿಶ್ವ ಜೇನು ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ. ಜೇನು ನೊಣಗಳು ಕೃಷಿಯಲ್ಲಿ ಅತ್ಯಮೂಲ್ಯವಾದ ಮಹತ್ವವನ್ನು ಹೊಂದಿದ್ದು, ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದರಿಂದ ರೈತರು ಪ್ರತ್ಯಕ್ಷ ಮತ್ತು ಪರೋಕ್ಷ ಉಪ ಯೋಗಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಳಬಾಳು ಗ್ರಾಮೀಣಾಭಿವೃದ್ದಿ ಸಂಸ್ಥೆ, ಸಿರಿಗೆರೆಯ ಸದಸ್ಯ ಇಟಗಿ ಶಿವಣ್ಣ ವಹಿಸಿದ್ದರು. 

error: Content is protected !!