ವ್ಯಾಪಕ ತಂತ್ರಜ್ಞಾನ, ಅನ್ವೇಷಣೆಗೆ ಉತ್ತೇಜನ

ವ್ಯಾಪಕ ತಂತ್ರಜ್ಞಾನ, ಅನ್ವೇಷಣೆಗೆ ಉತ್ತೇಜನ

ತುಮಕೂರು ವಿ.ವಿ.ಯ ಡಾ.ಪಿ. ಪರಮಶಿವಯ್ಯ

ದಾವಣಗೆರೆ, ಏ. 18 – ಭಾರತದಲ್ಲಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗುತ್ತಿದೆ. ಜನಸಮೂಹ ದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿರುವುದರಿಂದ ಅನ್ವೇಷಣೆ ಹಾಗೂ ಉತ್ಪಾದನೆಗೆ ಅತಿ ಹೆಚ್ಚಿನ ಉತ್ತೇಜನ ಸಿಗುತ್ತಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಪಿ. ಪರಮಶಿವಯ್ಯ ತಿಳಿಸಿದರು.

ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ – ಟೆಕ್ ಎಜುಕೇಷನ್‌ನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾಗಿದ್ದ ‘ಪ್ರಜ್ಞಾ’ ಒಂದು ದಿನದ ವಿದ್ಯಾರ್ಥಿಗಳ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭಾರತ, ಯುವಕರೇ ಹೆಚ್ಚಾಗಿ ರುವ ದೇಶವಾಗಿರುವುದರಿಂದ ಇಲ್ಲಿ ನವೋದ್ಯಮ ಹಾಗೂ ಅನ್ವೇಷಣೆ ಗಳಿಗೆ ಅತಿ ಹೆಚ್ಚಿನ ಅವಕಾಶವಿದೆ. ಬದಲಾಗುತ್ತಿರುವ ಆರ್ಥಿಕತೆ ಹಾಗೂ ಬೇಡಿಕೆಗಳನ್ನು ಪರಿಗಣಿಸಿ ಈ ಅವಕಾಶಗಳ ಲಾಭ ಪಡೆಯಬೇಕಿದೆ ಎಂದು ತಿಳಿಸಿದರು.

ಹದಿನೈದು ವರ್ಷಗಳ ಹಿಂದೆ ಬಿ.ಪಿ.ಒ. ವಲಯ ಅತಿ ಹೆಚ್ಚು ಬೆಳವಣಿಗೆ ಕಾಣುತ್ತಿತ್ತು. ಹಲವು ವಲಯಗಳ ಪದವೀಧರರಿಗೆ ಉದ್ಯೋಗ ಗಳು ಸಿಗುತ್ತಿದ್ದವು. ಈಗ ಆ ವಲಯ ಸಂಪೂರ್ಣ ಮರೆಯಾಗಿದೆ. ಅಲ್ಲೀಗ ಕೃತಕ ಬುದ್ಧಿವಂತಿಕೆ ಬಳಕೆಯಾಗುತ್ತಿದೆ. ಅದೇ ರೀತಿ ಮುಂದಿನ ಮೂರು ದಶಕಗಳಲ್ಲಿ ಈಗಿರುವ ಎಸ್.ಡಿ.ಎ., ಎಫ್.ಡಿ.ಸಿ. ಸೇರಿದಂತೆ ಬಹುತೇಕ ಉದ್ಯೋಗಗಳು ಮರೆಯಾಗಿ, ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದವರು ಹೇಳಿದರು.

ಮುಂಬೈ ಒಂದರಲ್ಲೇ 800ಕ್ಕೂ ಹೆಚ್ಚು ಎಸ್.ಬಿ.ಐ. ಬ್ಯಾಂಕ್ ಶಾಖೆಗಳಿದ್ದವು. ಸಾವಿರಾರು ಗ್ರಾಹಕರು ಪ್ರತಿದಿನ ಬರುತ್ತಿದ್ದರು. ಈಗ 100 ಶಾಖೆಗಳೂ ಉಳಿದಿಲ್ಲ. ಪ್ರತಿದಿನ ಬರುವವರ ಸಂಖ್ಯೆಯಲ್ಲಿ ಶೇ.90ರಷ್ಟು ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಸಂಪೂರ್ಣವಾಗಿ ಭೌತಿಕ ಸ್ವರೂಪ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.

ವಿಮೆ, ಸಹಕಾರ, ಸರಕು ಪೂರೈಕೆಯಿಂದ ಹಿಡಿದು ಹೋಟೆಲ್‌ಗಳವರೆಗೆ ಎಲ್ಲ ವಲಯಗಳ ಕಾರ್ಯನಿರ್ವಹಣೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಾಣಲಿದೆ. ಹಿಂದೊಂದು ಕಾಲದಲ್ಲಿ ಕೈಗಾರಿಕೀಕರಣ ಇಲ್ಲವೇ ವಿನಾಶ ಎಂಬ ಮಾತಿತ್ತು, ಈಗ ಆವಿಷ್ಕಾರ ಇಲ್ಲವೇ ವಿನಾಶ ಎಂಬ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ಬಾಪೂಜಿ ಹೈ ಟೆಕ್ ಎಜುಕೇಷನ್ ಸಂಸ್ಥೆಯ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ, ಬಿ.ಐ.ಇ.ಟಿ. ವಿಭಾಗ ಮುಖ್ಯಸ್ಥ ಡಾ. ಸುಜಿತ್ ಕುಮಾರ್, ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಡಾ. ನವೀನ್ ಉಪಸ್ಥಿತರಿದ್ದರು. ಸಂಜನ ಪ್ರಾರ್ಥಿಸಿದರು.
ಡಿ. ರೂಪ ಹಾಗೂ ವಿ.ಎನ್. ಸಂಜನ ನಿರೂಪಿಸಿದರು. ಪವನ್ ವಂದಿಸಿದರು.

error: Content is protected !!