7 ದಿನಗಳ ಬಸವ ಪ್ರಭಾತ್ ಪೇರಿ ಆರಂಭ : ಉದ್ಘಾಟನೆಯಲ್ಲಿ ಬಸವಪ್ರಭು ಶ್ರೀ ಅಭಿಮತ
ದಾವಣಗೆರೆ, ಏ. 17- ಬಸವ ತತ್ವಗಳ ಆಚರಣೆಯಿಂದ ವ್ಯಕ್ತಿ ಉದ್ಧಾರದ ಜೊತೆಗೆ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೇ ದೇಶ ಹಾಗೂ ಜಗತ್ತಿನ ಉದ್ಧಾರಕ್ಕಾಗಿ ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಬಸವ ಜಯಂತಿ ಅಂಗವಾಗಿ ನಗರದ ವಿರಕ್ತಮಠ ಹಾಗೂ ಲಿಂಗಾಯತ ತರುಣ ಸಂಘದಿಂದ ಇಂದು ಹಮ್ಮಿಕೊಂಡಿದ್ದ 107 ನೇ ವರ್ಷದ ಬಸವ ಪ್ರಭಾತ್ ಪೇರಿಯ ನೇತೃತ್ವ ವಹಿಸಿಕೊಂಡು ಶ್ರೀಗಳು ಆಶೀರ್ವಚನ ನೀಡಿದರು.
ಬಸವ ತತ್ವಗಳು ಕೇವಲ ಮಾನವಕುಲದ ಒಳಿತಿಗಾಗಿ ನೀತಿಯನ್ನು ಬೋಧನೆ ಮಾಡಿಲ್ಲ. 12 ನೇ ಶತಮಾನದ ಶರಣರು ಜಗತ್ತಿನ ಸಕಲ ಜೀವರಾಶಿಗಳ ಉಳಿವಿಗಾಗಿ ಹಾಗೂ ಉದ್ಧಾರಕ್ಕಾಗಿ ಬಸವ ತತ್ವಗಳನ್ನು ಬೋಧಿಸಿದ್ದಾರೆ ಹಾಗಾಗಿ ಪ್ರಸ್ತುತ ದಿನಗಳಲ್ಲಿ ಜಾಗತಿಕವಾಗಿ ಬಸವ ತತ್ವಗಳು ಪ್ರಕಾಶಿಸುತ್ತಿವೆ ಎಂದರು.
ಈ ಆಧುನಿಕ ಯುಗದಲ್ಲಿ ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳಿಗೆ ವಿದೇಶಿಗರು ಮನ ಸೋತಿದ್ದಾರೆ. ಅವರು ಬಸವಣ್ಣನವರು ಸಂಶೋಧನೆ ಮಾಡಿ ಕೊಡುಗೆಯಾಗಿ ನೀಡಿದ ಇಷ್ಟಲಿಂಗವನ್ನು ಧರಿಸಿ, ಶಿವಯೋಗ ಸಾಧನೆಯನ್ನು ಮಾಡಿ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಕಂಡಿದ್ದಾರೆ. ಹಾಗಾಗಿ ಬಸವ ತತ್ವಗಳ ಪಾಲನೆ ಮಾಡಲು ಈಗ ಹೆಚ್ಚು ವಿದೇಶಿಯರು ಬರುತ್ತಿದ್ದಾರೆ. ಅವರು ಧ್ಯಾನಾಸಕ್ತರಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಈಗ ಬಹುತೇಕ ಲಿಂಗಾಯತರ ಕೊರಳಲ್ಲಿ ಇಷ್ಟಲಿಂಗಗಳೇ ಕಣ್ಮರೆಯಾಗಿವೆ. ಯಾರು ಪ್ರತಿದಿನವೂ ತಪ್ಪದೇ ತಮ್ಮ ಪಾಲಿನ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾರೋ ಅವರು ಬಸವಣ್ಣ ನವರ ಅನುಯಾಯಿಗಳಾಗುತ್ತಾರೆ ಎಂದರು.
ಬಸವ ಜಯಂತಿ ಆಚರಣೆ ವಿಶ್ವದಲ್ಲೇ ಮೊದಲ ಬಾರಿಗೆ 1913 ರಲ್ಲಿ ವಿರಕ್ತಮಠದಿಂದ ಶ್ರೀ ಮೃತ್ಯುಂಜಯ ಅಪ್ಪಗಳು, ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ಪ್ರಾರಂಭಿಸಿದರು. ನಂತರ ಬಸವ ತತ್ವಗಳನ್ನು ಮನೆ ಮನಕ್ಕೆ ಮುಟ್ಟಿಸಲು 1917 ರಲ್ಲಿ ಬಸವ ಪ್ರಭಾತ್ ಫೇರಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ನಿರಂತರ ವಾಗಿ ಬಸವ ತತ್ವದ ಕಾರ್ಯವನ್ನು ಶ್ರೀಮಠವು ಮಾಡುತ್ತಿದೆ.
ಕಣಕುಪ್ಪಿ ಸಹೋದರರಾದ ಗುರುಪಾದಪ್ಪ, ಕೊಟ್ರಬಸಪ್ಪನವರು ಲಿಂಗಾಯತ ತರುಣ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಾಲಗಂಗಾಧರ ತಿಲಕರು ಗಣೇಶನ ಹಬ್ಬವನ್ನು ಪ್ರಾರಂಭಿಸಿ ಜನರನ್ನು ಸಂಘಟಿಸಿದರು. ಅದೇ ರೀತಿಯಲ್ಲಿ ಹರ್ಡೇಕರ ಮಂಜಪ್ಪನವರು ಬಸವ ಜಯಂತಿ ಆಚರಣೆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಘಟಿಸಿದರು ಎಂದು ಶ್ರೀಗಳು ತಿಳಿಸಿದರು.
ಜನಜಾಗೃತಿ ಬಸವ ಪ್ರಭಾತ್ ಫೇರಿಯು ಗಾಂಧಿನಗರಕ್ಕೆ ಆಗಮಿಸಿದಾಗ ಮುಖಂಡರುಗಳಾದ ರಾಮಸ್ವಾಮಿ, ಶಾಮಿಯಾನದ ಮಲ್ಲಿಕಾರ್ಜುನ್, ನೀಲಗಿರಿಯಪ್ಪ, ಹನುಮಂತಪ್ಪ, ರಾಕೇಶ್ ಮುಂತಾದವರು ಭವ್ಯವಾಗಿ, ಅದ್ಧೂರಿಯಾಗಿ ಸ್ವಾಗತಿಸಿದರು.
ಸಮಾರಂಭದಲ್ಲಿ ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ, ಜಗದ್ಗುರು ಜಯದೇವ ಪ್ರಸಾದ ನಿಲಯದ ಕಾರ್ಯದರ್ಶಿ ಎಂ.ಜಯಕುಮಾರ್, ವಿರಕ್ತ ಮಠದ ಸಮಿತಿಯವರಾದ ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶಪ್ಪ, ಚಿಗಟೇರಿ ಜಯದೇವ, ಕುಂಟೋಜಿ ಚನ್ನಪ್ಪ, ಟಿ.ಎಂ. ವೀರೇಂದ್ರ, ವಿನಾಯಕ ಶ್ರೀಗಂಧ, ಕಣಕುಪ್ಪಿ ಕರಿಬಸಪ್ಪ, ಜಯರಾಜ್, ಚನ್ನಬಸವ ಶೀಲವಂತ್, ಜಾಲಿಮರದ ಕೋಟ್ರೇಶ್, ಉಮೇಶ್, ಬಸವಕಲಾ ಲೋಕದ ಶಶಿಧರ್, ಕುಮಾರಸ್ವಾಮಿ, ಶರಣಬಸವ, ಕೀರ್ತಿ, ರೋಷನ್, ಫಾರೂಖ್, ಮಹದೇವಮ್ಮ, ಶಿವಬಸಮ್ಮ ಇತರರು ಇದ್ದರು.
ಜನಜಾಗೃತಿ ಬಸವ ಪ್ರಭಾತ್ ಫೇರಿಯು ವಿರಕ್ತ ಮಠದಿಂದ ಪ್ರಾರಂಭವಾಗಿ ಚೌಕಿಪೇಟೆ, ಮಹಾರಾಜಪೇಟೆ, ಗಾಂಧಿನಗರ, ಹಗೇದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆಯಿಂದ ವಿರಕ್ತಮಠ ತಲುಪಿತು. ಬಸವಕಲಾ ಲೋಕದ ಕಲಾವಿದರು ವಚನ ಗೀತೆ, ಜನಜಾಗೃತಿ ಗೀತೆಗಳನ್ನು ಹಾಡಿದರು.