ಮಾನ್ಯರೇ,
ವಿಶ್ವದ ಅತ್ಯಂತ ಶ್ರೀಮಂತ ದೇವರು ಎನಿಸಿಕೊಂಡಿರುವ, ಮತ್ತು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಧಾರ್ಮಿಕ ಕ್ಷೇತ್ರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಳೆದ ವಾರ ಕುಟುಂಬ ಸಮೇತರಾಗಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ, ವಿಮಾನದ ಮೂಲಕ ತಿರುಪತಿಗೆ ತೆರಳಿದೆವು. ನಮ್ಮ ಕುಟುಂಬಕ್ಕೆ ಮೊದಲ ಬಾರಿಯ ವಿಮಾನ ಪ್ರಯಾಣವಾದ್ದರಿಂದ ಬಹಳ ಖುಷಿಯ ಅನುಭವವಾಯಿತು. ವಿಮಾನ ಹತ್ತುವಾಗಿನಿಂದ ಹಿಡಿದು ಇಳಿಯುವವರೆಗೂ ವಿಮಾನ ಸಿಬ್ಬಂದಿಯ ಸೇವೆಯೂ ಕೂಡ ತುಂಬಾ ಚೆನ್ನಾಗಿತ್ತು. ಆದರೆ ಅಲ್ಲಿ ನಾಲ್ಕೈದು ಸಿಬ್ಬಂದಿ ಇದ್ದರೂ ಕೂಡ ಯಾರೊಬ್ಬರಿಗೂ ಕನ್ನಡ ಭಾಷೆ ಬಾರದೆ ಇದ್ದದ್ದು ಸ್ವಲ್ಪ ಬೇಸರವೇನಿಸಿತು.
ನನಗೆ ಇಂಗ್ಲಿಷ್, ಹಿಂದಿ ಎರಡೂ ಭಾಷೆ ಗೊತ್ತಿದ್ದರಿಂದ ಅವರ ಜೊತೆ ಮಾತನಾಡಲು ಸುಲಭವಾಯಿತು. ಆದರೆ ಅಲ್ಲಿದ್ದ ಕೆಲ ಪ್ರಯಾಣಿಕರಿಗೆ ಬೇರೆ ಭಾಷೆಯ ಜ್ಞಾನವಿಲ್ಲದೆ ಇದ್ದುದರಿಂದ ಕೊಂಚ ಪರದಾಡಿದರು. ಅಂತರಾಷ್ಟ್ರೀಯ ವಿಮಾನ ಆಗಿದ್ದರೆ ಸರಿ. ಆದರೆ ನಮ್ಮ ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವ ದೇಶೀಯ ವಿಮಾನವಾದ್ದರಿಂದ, ಕನಿಷ್ಠ ಕನ್ನಡ ಭಾಷೆ ಬಲ್ಲಂತಹ ಒಬ್ಬ ಸಿಬ್ಬಂದಿಯಾದರು ಇರಬೇಕಿತ್ತು.
ಹಿಂದಿ ರಾಷ್ಟ್ರೀಯ ಭಾಷೆಯಾಗಿರಬಹುದು ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ಅಸ್ತಿತ್ವ, ಅಸ್ಮಿತೆ ಉಳಿಸಲು ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.